Thursday, June 18, 2026
ಸುದ್ದಿ

ತಲೆಮರೆಸಿಕೊಂಡಿದ್ದ ಕಳವು ಪ್ರಕರಣದ ಆರೋಪಿ ‘ಡಾಲರ್ ಸಲಾಂ’ ಪೊಲೀಸರ ವಶಕ್ಕೆ-ಕಹಳೆ ನ್ಯೂಸ್

ಮಂಗಳೂರು: ಕಳವು ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿ, ಕಳೆದ ಕೆಲವು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಪುತ್ತೂರಿನ ಕುಖ್ಯಾತ ಆರೋಪಿಯನ್ನು ವಿಟ್ಲ ಠಾಣಾ ಪೊಲೀಸರು ಪುತ್ತೂರು ರೈಲ್ವೆ ನಿಲ್ದಾಣದ ಬಳಿ ಮಂಗಳವಾರ (ಜೂನ್ 16) ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು

ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ನಿವಾಸಿ ಮೊಹಮ್ಮದ್ ಸಲಾಂ ಅಲಿಯಾಸ್ ಕೆ. ಎಂ. ಸಲಾಂ ಅಲಿಯಾಸ್ ‘ಡಾಲರ್ ಸಲಾಂ’ (Dollar Salam) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿ ಮೊಹಮ್ಮದ್ ಸಲಾಂ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ 2020ರ ಸಾಲಿನಲ್ಲಿ ಮನೆಗಳ್ಳತನ ಹಾಗೂ ಕಳವು ಪ್ರಕರಣ (ಅ.ಕ್ರ ನಂ: 24/2020, ಕಲಂ 457, 380 ಐಪಿಎಸ್) ಮತ್ತು 2022ರ ಸಾಲಿನಲ್ಲಿ ಮತ್ತೊಂದು ಕಳವು ಪ್ರಕರಣ (ಅ.ಕ್ರ ನಂ: 34/2022, ಕಲಂ 457, 380 ಐಪಿಎಸ್) ದಾಖಲಾಗಿದ್ದವು. ಈ ಪ್ರಕರಣಗಳಲ್ಲಿ ಜಾಮೀನು ಪಡೆದು ಹೊರಬಂದಿದ್ದ ಈತ, ತದನಂತರ ಮಾನ್ಯ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಈತನ ವಿರುದ್ಧ ವಾರೆಂಟ್ ಹೊರಡಿಸಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇದರೊಂದಿಗೆ, ಆರೋಪಿ ಸಲಾಂ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲೂ ಸಹ ಸರ್ಕಾರಿ ನೌಕರರ ಮೇಲೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿ ಹಾಗೂ ಜೀವ ಬೆದರಿಕೆ ಹಾಕಿದ ಗಂಭೀರ ಪ್ರಕರಣ (ಅ.ಕ್ರ: 45/2023, ಕಲಂ 353, 332, 504 ಐಪಿಎಸ್) ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆಗೂ ಹಾಜರಾಗದ ಕಾರಣ ಪುತ್ತೂರು ನ್ಯಾಯಾಲಯದಿಂದಲೂ ಈತನಿಗೆ ವಾರೆಂಟ್ ಜಾರಿಯಾಗಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಿಟ್ಲ ಉಪನಿರೀಕ್ಷಕರು ಹಾಗೂ ಸಿಬ್ಬಂದಿಗಳ ತಂಡ, ಪುತ್ತೂರು ರೈಲ್ವೆ ನಿಲ್ದಾಣದ ಬಳಿ ಹೊಂಚು ಹಾಕಿ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ (Judicial Custody) ವಿಧಿಸಿ ಆದೇಶಿಸಿದೆ.