
ಬೆಂಗಳೂರು : ತೀವ್ರ ಅಲರ್ಜಿ ಸಮಸ್ಯೆಯ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಯಾರೂ ತಮಗೆ ‘ಸುಗಂಧರಾಜ’ ಹೂವಿನ ಹಾರಗಳನ್ನು ಹಾಕಬಾರದು ಎಂದು ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಡಿಕೆಶಿ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕಟ್ಟುನಿಟ್ಟಿನ ಮನವಿ ಮಾಡಿದ್ದಾರೆ.
ದಯವಿಟ್ಟು ಯಾರು ಮುಜುಗರ ಕೊಡದಂತೆ ವಿನಂತಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನನಗೆ ಸುಗಂಧರಾಜ ಹೂವುಗಳಿಂದ ತೀವ್ರವಾದ ಅಲರ್ಜಿ ಇದೆ. ಈ ಹೂವುಗಳು ಮೈಗೆ ತಗುಲಿದರೆ ದೇಹದಲ್ಲಿ ತೀವ್ರ ತುರಿಕೆ ಮತ್ತು ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕಾರ್ಯಕರ್ತರ ಪ್ರೀತಿ, ಉತ್ಸಾಹ ನನಗೆ ಅರ್ಥವಾಗುತ್ತದೆ. ಆದರೆ ದಯವಿಟ್ಟು ಯಾರೂ ಈ ಹೂವಿನ ಹಾರಗಳನ್ನು ತರಬೇಡಿ” ಎಂದು ಕೋರಿದ್ದಾರೆ.
ಇದೇ ವೇಳೆ ಭಾವುಕರಾಗಿ ಮಾತನಾಡಿದ ಅವರು, “ಇಲ್ಲಿ ಸಿಎಂ ಆಗುತ್ತಿರುವುದು ಡಿ.ಕೆ. ಶಿವಕುಮಾರ್ ಎಂಬ ವ್ಯಕ್ತಿಯಲ್ಲ, ಬದಲಿಗೆ 1980ರಿಂದ ಪಕ್ಷಕ್ಕಾಗಿ ದುಡಿದ ಒಬ್ಬ ಸಾಮಾನ್ಯ ಕಾರ್ಯಕರ್ತ” ಎಂದರು. ಮುಂಬರುವ ಪ್ರಮಾಣವಚನ ಕಾರ್ಯಕ್ರಮಕ್ಕೆ ಜಾಗದ ಕೊರತೆ ಇರುವುದರಿಂದ, ಕಾರ್ಯಕರ್ತರು ಬೆಂಗಳೂರಿಗೆ ಬಂದು ಜನದಟ್ಟಣೆ ಮಾಡದೆ ತಮ್ಮ ತಮ್ಮ ಜಿಲ್ಲೆಗಳಲ್ಲೇ ಸಂಭ್ರಮಿಸಬೇಕಾಗಿ ವಿನಂತಿಸಿದರು.











