ಬೆಂಗಳೂರಿಗೆ ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಚೊಚ್ಚಲ ಭೇಟಿ :ಇಂದು ನಾಯಕರೊಂದಿಗೆ ಸಭೆ -ಕಹಳೆ ನ್ಯೂಸ್

ಬೆಂಗಳೂರು: ಪಶ್ಚಿಮ ಬಂಗಾಳದಲ್ಲಿ ಜಯಭೇರಿ ಬಾರಿಸಿದ ಬೆನ್ನಲ್ಲೇ, ಭಾರತೀಯ ಜನತಾ ಪಕ್ಷದ ಹೈಕಮಾಂಡ್ ಈಗ ದಕ್ಷಿಣ ಭಾರತದ ಹೆಬ್ಬಾಗಿಲಾದ ಕರ್ನಾಟಕದತ್ತ ತನ್ನ ಸಂಪೂರ್ಣ ಚಿತ್ತ ನೆಟ್ಟಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಈಗಿನಿಂದಲೇ ಸನ್ನದ್ಧಗೊಳಿಸಲು ಖುದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್ ಅವರು ಶನಿವಾರ ತಡರಾತ್ರಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಚೊಚ್ಚಲ ಭೇಟಿ ನೀಡಿದ್ದಾರೆ.
ಅಲ್ಲಿಂದ ಅವರು ಹೆಬ್ಬಾಳದ ಖಾಸಗಿ ಹೋಟೆಲ್‌ಗೆ ಆಗಮಿಸಿದರು. ಕಾಕತಾಳೀಯ ಎಂಬಂತೆ ರಾಷ್ಟ್ರೀಯ ಅಧ್ಯಕ್ಷರ ಜನ್ಮದಿನವೂ ಆಗಿದ್ದರಿಂದ ಹೋಟೆಲ್‌ನಲ್ಲಿ ರಾಜ್ಯ ನಾಯಕರು ಸಿಹಿ ತಿನ್ನಿಸುವ ಮೂಲಕ ನಿತಿನ್ ನಬಿನ್ ಅವರ ಹುಟ್ಟುಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಿ ಶುಭ ಕೋರಿದರು. ಬಳಿಕ ಅವರು ಜಕ್ಕೂರಿನಲ್ಲಿರುವ ತಮ್ಮ ಸಹೋದರಿಯ ಮನೆಗೆ ತೆರಳಿ, ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.
ಇಂದು ಪಕ್ಷದ ಕಚೇರಿಯಲ್ಲಿ ನಿತಿನ್ ನಬಿನ್ ಅವರು ಸರಣಿ ಹೈವೋಲ್ಟೇಜ್ ಮೀಟಿಂಗ್‌ಗಳನ್ನು ನಡೆಸಲಿದ್ದಾರೆ. ರಾಜ್ಯದ ಹಾಲಿ-ಮಾಜಿ ಶಾಸಕರು, ಸಂಸದರು, ಎಂಎಲ್‌ಸಿಗಳು ಹಾಗೂ ಪದಾಧಿಕಾರಿಗಳ ಜೊತೆ ಅವರು ಪ್ರತ್ಯೇಕ ಸಭೆ ನಡೆಸಲಿದ್ದಾರೆ. ಸಂಜೆ ರಾಜ್ಯ ಕೋರ್ ಕಮಿಟಿ ಸಭೆಯೂ ನಡೆಯಲಿದೆ.
ಮುಖ್ಯವಾಗಿ, ರಾಜ್ಯ ಬಿಜೆಪಿಯಲ್ಲಿ ದೀರ್ಘಕಾಲದಿಂದ ಬೇರು ಬಿಟ್ಟಿರುವ ಆಂತರಿಕ ಸಂಘರ್ಷ ಹಾಗೂ ಭಿನ್ನಮತಕ್ಕೆ ಸಂಪೂರ್ಣ ಫುಲ್‌ಸ್ಟಾಪ್ ಇಡಲು ರಾಷ್ಟ್ರೀಯ ಅಧ್ಯಕ್ಷರು ಕಠಿಣ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಪಕ್ಷವನ್ನು ಅಧಿಕಾರಕ್ಕೆ ತರಲು ಒಟ್ಟಾಗಿ ಶ್ರಮಿಸಬೇಕೆಂದು ನಾಯಕರಿಗೆ ಒಗ್ಗಟ್ಟಿನ ಮಂತ್ರ ಬೋಧಿಸಲಿದ್ದಾರೆ.










