ದೇಶದ ಆರ್ಥಿಕ ಬಿಕ್ಕಟ್ಟು ನಿವಾರಣೆ, ರಾಜ್ಯದಲ್ಲಿ ಉತ್ತಮ ಮಳೆಗಾಗಿ ತಿಮ್ಮಪ್ಪನ ಬಳಿ ಪ್ರಾರ್ಥನೆ: ಡಿಕೆಶಿ -ಕಹಳೆ ನ್ಯೂಸ್

ಬೆಂಗಳೂರು: ದೇಶವು ಆರ್ಥಿಕ ಬಿಕ್ಕಟ್ಟಿನಿಂದ ಬಳಲಬಾರದು. ಎಲ್ಲರಿಗೂ ಶಕ್ತಿ, ಉತ್ತಮ ಆರೋಗ್ಯ ಲಭಿಸಲಿ. ರಾಜ್ಯದಲ್ಲಿ ಉತ್ತಮ ಮಳೆ ಬರಲಿ ಎಂದು ಭಗವಂತ ವೆಂಕಟೇಶ್ವರನ ಬಳಿ ಪ್ರಾರ್ಥಿಸಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಡಿಸಿಎಂ ಡಿಕೆಶಿ ಅವರು ತಿರುಮಲದಲ್ಲಿ ಮಂಗಳವಾರ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು, ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಇಡೀ ದೇಶ ಶಾಂತಿಯಿಂದ ಕೂಡಿರಲಿ. ಸವಾಲುಗಳನ್ನು ಸಮರ್ಥವಾಗಿ ಎದುರಿಸಲಿ ಎಂದು ಕೋರಿಕೊಂಡಿದ್ದೇನೆ. ಈ ಮಹತ್ವದ ದಿನದಂದು ಇಲ್ಲಿಗೆ ಬಂದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಬಹಳ ಸಮಯದ ನಂತರ ಅಂದರೆ ಆರೇಳು ವರ್ಷಗಳ ನಂತರ ನಾನು ಇಲ್ಲಿಗೆ ಭೇಟಿ ನೀಡಿದ್ದೇನೆ. ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ಬಹಳಷ್ಟು ಬದಲಾವಣೆಗಳನ್ನು, ಬಹಳಷ್ಟು ಅಭಿವೃದ್ಧಿಗಳನ್ನು ಮಾಡಿದೆ. ಶಿಸ್ತು, ಉತ್ತಮ ಶುಚಿತ್ವ ಕಾಪಾಡಿದೆ. ಉತ್ತಮ ಆಡಳಿತ ನಡೆಸುತ್ತಿದೆ. ಸರ್ಕಾರ ಉತ್ತಮ ಕೆಲಸ ಮಾಡಿದೆ. ನಾನು ಎಲ್ಲರಿಗೂ ಧನ್ಯವಾದ ಹೇಳುತ್ತೇನೆ ಎಂದರು.









