ಪೋಷಕರು ಮಕ್ಕಳನ್ನು ಸುಸಂಸ್ಕೃತರನ್ನಾಗಿ ರೂಪಿಸಬೇಕು :ಡಾ. ಧನಂಜಯ ಕುಂಬ್ಳೆ -ಕಹಳೆ ನ್ಯೂಸ್

ಪುತ್ತೂರು :ಶ್ರೇಷ್ಠ ವಿಚಾರಗಳನ್ನು ಗಳಿಸಿಕೊಳ್ಳುವ ಕಾರ್ಯ ಉಪನಯನ ಸಂಸ್ಕಾರದ ನಂತರ ಆರಂಭವಾಗುತ್ತದೆ. ಪೋಷಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರಗಳನ್ನು ನೀಡಿ ಬದುಕಿನಲ್ಲಿ ಮುನ್ನಡೆಯಲು ಪ್ರೇರೇಪಿಸಬೇಕು.ನಮ್ಮ ಪಠ್ಯಕ್ರಮಗಳಲ್ಲಿ ವೇದಮಂತ್ರಗಳ ಹಾಗೂ ಭಾರತೀಯ ಸಂಸ್ಕೃತಿಯ ಬಗ್ಗೆ ಸೇರ್ಪಡೆಗೊಳಿಸುವುದು ಅತ್ಯಗತ್ಯ. ನಾವೆಲ್ಲರೂ ಸಂಘಟಿತರಾಗಿ ಒಳ್ಳೆಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ನಮ್ಮ ಪ್ರದೇಶಗಳನ್ನು ಸುಸಂಸ್ಕೃತವಾಗಿ ರೂಪಿಸಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯದ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಹಾಗೂ ಕನ್ನಡ ವಿಭಾಗದ ಸಹಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಅವರು ನುಡಿದರು.

ಇವರು ಪುತ್ತೂರಿನ ಮುಕ್ರಂಪಾಡಿಯ ಗೋಕುಲ ಬಡಾವಣೆಯ ನಂದಗೋಕುಲ ವೇದಿಕೆಯಲ್ಲಿ ದ್ವಾರಕಾ ಪ್ರತಿಷ್ಠಾನ(ರಿ.) ಪುತ್ತೂರು ಇದರ ಆಶ್ರಯದಲ್ಲಿ, ಕೃಷ್ಣಭಟ್ಟ ಪ್ರತಿಷ್ಠಾನ(ರಿ.) ಚೂಂತಾರು ಇದರ ಸಹಕಾರದಲ್ಲಿ ನಡೆದ ಐದನೇ ವರ್ಷದ ಉಚಿತ ವಸಂತ ವೇದಪಾಠ ಶಿಬಿರದ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದ ಹಿರಿಯ ಭೂಗರ್ಭಶಾಸ್ತ್ರಜ್ಞ, ಕೃಷಿಕ ಹಾಗೂ ಸಾಹಿತಿ ಮಧುರಕಾನನ ಗಣಪತಿ ಭಟ್ಟ ಅವರು ಮಾತನಾಡಿ ಮಕ್ಕಳು ಸುಶಿಕ್ಷಿತರಾದರೆ ಸಮಾಜ ಜಾಗೃತವಾದಂತೆ. ಸಮಾಜ ಜಾಗೃತಗೊಂಡರೆ ದೇಶ ಪ್ರಗತಿಯೆಡೆಗೆ ಸಾಗಬಹುದು. ಕಲಿಕೆ,ನಿತ್ಯದ ಅನುಷ್ಠಾನಗಳೊಂದಿಗೆ ಕೃಷಿ ಕಾರ್ಯದಲ್ಲೂ ಆಸಕ್ತಿ ವಹಿಸುವುದು ಮುಖ್ಯ.ಸ್ವಂತಿಕೆ, ಸಮಯಪಾಲನೆ ಇತ್ಯಾದಿ ಗುಣಗಳನ್ನು ರೂಢಿಸಿಕೊಂಡಾಗ ಬದುಕು ಸುಖಮಯವಾಗುತ್ತದೆ ಎಂದರು.
ವೈದಿಕ ಹಾಗೂ ಶಿಬಿರದ ವೇದಾಧ್ಯಾಪಕ ದುರ್ಗಾಭಿರಾಮ ಭಟ್ಟ ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ವೇದವಿದ್ಯೆ ಎಂಬುದು ಅತ್ಯಂತ ಪವಿತ್ರವಾಗಿದ್ದು ಸದಾಕಾಲ ಅಭ್ಯಾಸ ಮಾಡುವುದು ಅವಶ್ಯಕ. ತಂದೆ ತಾಯಿಯರ ಆಶಿರ್ವಾದ ನಮ್ಮ ಯಶಸ್ಸಿಗೆ ತುಂಬಾ ಮುಖ್ಯ ಎಂದು ತಿಳಿಸಿದರು.
ದ್ವಾರಕಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಶ್ರೀ ಹರಿಕೃಷ್ಣ ಭಟ್ಟ ಅರ್ತ್ಯಡ್ಕ ಅವರು ಅಧ್ಯಕ್ಷೀಯ ನುಡಿಗಳನ್ನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಹಿರಿಯ ವೈದಿಕ ಪರಿಚಾರಕರಾದ ಶ್ರೀ ಮಾರ್ಗ ತಿರುಮಲೇಶ್ವರ ಭಟ್ಟ ಅವರನ್ನು ಕೃಷ್ಣಭಟ್ಟ ಪ್ರತಿಷ್ಠಾನ (ರಿ.), ಚೂಂತಾರು ಇದರ ವತಿಯಿಂದ ಸನ್ಮಾನಿಸಲಾಯಿತು.
ವೇದ ಶಿಬಿರದ ಶಿಬಿರಾರ್ಥಿಗಳಿಗೆ ಅರ್ಹತಾ ಪತ್ರವನ್ನು ವಿತರಿಸಿ ಅಭಿನಂದಿಸಲಾಯಿತು.
ಉಚಿತ ವಸಂತ ವೇದಪಾಠ ಶಿಬಿರದ ಗುರುವೃಂದದವರನ್ನು, ಸಂಯೋಜಕರನ್ನು, ಪಾಕಶಾಸ್ತ್ರಜ್ಞರನ್ನು ಹಾಗೂ ಶಿಬಿರದ ಯಶಸ್ಸಿಗೆ ಸಹಕರಿಸಿದ ಎಲ್ಲರನ್ನೂ ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ ಯೋಗ ಪ್ರಾತ್ಯಕ್ಷಿಕೆ ನಡೆಯಿತು.
ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಶ್ರೀ ಗೋಪಾಲಕೃಷ್ಣ ಭಟ್ಟ ಅರ್ತ್ಯಡ್ಕ ಅವರು ಸ್ವಾಗತಿಸಿ ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ಗಣರಾಜ ಕುಂಬ್ಳೆ ಅವರು ವಂದಿಸಿದರು.
ವೇದಾಧ್ಯಾಪಕ ಶ್ರೀ ನವೀನಕೃಷ್ಣ ಎಸ್. ಉಪ್ಪಿನಂಗಡಿ ನಿರೂಪಿಸಿದರು.









