‘ಭಾರತ ಎಂದಿಗೂ ಭಯೋತ್ಪಾದನೆಗೆ ತಲೆಬಾಗುವುದಿಲ್ಲ’: ಪಹಲ್ಗಾಮ್ ದಾಳಿ ನೆನೆದು ಮೋದಿ ಮತ್ತೆ ಖಡಕ್ ವಾರ್ನಿಂಗ್!- ಕಹಳೆ ನ್ಯೂಸ್

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಈಗ ಒಂದು ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರನ್ನು ಸ್ಮರಿಸಿ, ಅವರ ಕುಟುಂಬಗಳಿಗೆ ಸಾಂತ್ವನ ತಿಳಿಸಿದ್ದಾರೆ. ಕಳೆದ ವರ್ಷ ಇದೇ ದಿನ ನಡೆದ ಭೀಕರ ದಾಳಿಯಲ್ಲಿ ಬಲಿಯಾದ ಮುಗ್ಧ ಪ್ರವಾಸಿಗರು ಮತ್ತು ಸ್ಥಳೀಯರನ್ನು ನೆನಪಿಸಿಕೊಂಡ ಅವರು, ‘ಅವರನ್ನು ಎಂದಿಗೂ ಮರೆಯಲಾಗುವುದಿಲ್ಲ’ ಎಂದು ತಿಳಿಸಿ ಮೃತಪಟ್ಟವರಿಗೆ ಗೌರವ ಸಲ್ಲಿಸಿದರು. ಜೊತೆಗೆ ಶತ್ರುಗಳಿಗೂ ಎಚ್ಚರಿಕೆ ನೀಡಿದರು.
ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರನ್ನು ಎಂದಿಗೂ ಮರೆಯಲಾಗುವುದಿಲ್ಲ, ದುಃಖಿತ ಕುಟುಂಬಗಳ ದುಃಖದಲ್ಲಿ ದೇಶದ ಜನರ ಜೊತೆ ತಾನೂ ಭಾಗಿಯಾಗಿದ್ದೇನೆ ಎಂದು ಅವರು “X” ನಲ್ಲಿ ಬರೆದಿದ್ದಾರೆ. ಅಲ್ಲದೇ ಭಯೋತ್ಪಾದನೆ ಬಗ್ಗೆಯೂ ವಾರ್ನಿಂಗ್ ಕೊಟ್ಟಿದ್ದಾರೆ.
ಭಯೋತ್ಪಾದನೆ ವಿರುದ್ಧ ಗುಡುಗಿದ ಮೋದಿ
ಭಯೋತ್ಪಾದನೆಯ ವಿರುದ್ಧ ಭಾರತದ ದೃಢ ನಿಲುವನ್ನು ಪುನರುಚ್ಚರಿಸಿದ ಮೋದಿ, ‘ಒಂದು ರಾಷ್ಟ್ರವಾಗಿ ನಾವು ದುಃಖದಲ್ಲೂ, ಸಂಕಲ್ಪದಲ್ಲೂ ಒಗ್ಗಟ್ಟಿನಿಂದ ನಿಲ್ಲುತ್ತೇವೆ. ಭಾರತ ಯಾವುದೇ ರೀತಿಯ ಭಯೋತ್ಪಾದನೆಗೆ ತಲೆಬಾಗುವುದಿಲ್ಲ. ಭಯೋತ್ಪಾದಕರ ಘೋರ ಯೋಜನೆಗಳು ಎಂದಿಗೂ ಯಶಸ್ವಿಯಾಗುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದರು. ಏಪ್ರಿಲ್ 22 ರಂದು ನಡೆದ ಆ ದಾಳಿ ದೇಶವನ್ನೇ ಬೆಚ್ಚಿಬೀಳಿಸಿತ್ತು. ಅದರ ಮೊದಲ ವರ್ಷದ ಅಂಗವಾಗಿ ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ಬಲಿಪಶುಗಳಿಗೆ ಗೌರವ ಸಲ್ಲಿಸಲಾಯಿತು.









