ಚಂದಿರನತ್ತ ಮಾನವ : ಐತಿಹಾಸಿಕ ಆರ್ಟೆಮಿಸ್-II ಮಿಷನ್ ಉಡಾವಣೆ ಯಶಸ್ವಿ

ಫ್ಲೋರಿಡಾ: 50 ವರ್ಷಗಳ ಬಳಿಕ ಚಂದಿರನ ಅನ್ವೇಷಣೆಗೆ ಹೊರಟಿರುವ ನಾಸಾ ಐತಿಹಾಸಿಕ ಆರ್ಟೆಮಿಸ್-ಮಿಷನ್ ಉಡಾವಣೆ ಯಶಸ್ವಿಯಾಗಿದೆ. ಅಮೆರಿಕದ ಕಾಲಮಾನ ಬುಧವಾರ ಸಂಜೆ 6:35(ಭಾರತೀಯ ಕಾಲಮಾನ ಗುರುವಾರ ಬೆಳಗ್ಗೆ4:05) ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಾಲ್ವರು ಗಗನಯಾತ್ರಿಗಳಿದ್ದ ಒರಾಯನ್ ಬಾಹ್ಯಾಕಾಶ ನೌಕೆಯನ್ನು ಅತ್ಯಂತ ಶಕ್ತಿಶಾಲಿ ಸ್ಪೇಸ್ ಲಾಂಚ್ ಸಿಸ್ಟಮ್ ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ.
ನೌಕೆಯು ಭೂಮಿಯ ಸುತ್ತ ತನ್ನ ಮೊದಲ ಕಕ್ಷೆಯಲ್ಲಿ ಸಂಚರಿಸಲಾರಂಭಿಸಿದ ಬಳಿಕ 10 ರಿಂದ 40 ನಿಮಿಷಗಳವರೆಗೆ ಗಗನಯಾತ್ರಿಗಳು ಮತ್ತು ನಾಸಾ ನಿಯಂತ್ರಣ ಕೇಂದ್ರವು ನೌಕೆಯ ಸೌರಫಲಕಗಳು ಸರಿಯಾಗಿ ತೆರೆದುಕೊಂಡಿವೆಯೇ ಎಂದು ಪರೀಕ್ಷಿಸಿದರು.
1972ರ ಅಪೊಲೊ 17 ಮಿಷನ್ ನಂತರ, ಸುಮಾರು 50 ವರ್ಷಗಳ ಬಳಿಕ ಚಂದ್ರನ ಸಮೀಪಕ್ಕೆ ಮಾನವರು ಪ್ರಯಾಣಿಸುತ್ತಿರುವುದು ಇದೇ ಮೊದಲು. ಈ ಬಾರಿ ಗಗನಯಾತ್ರಿಗಳು ಚಂದ್ರನ ಮೇಲೆ ಇಳಿಯುವುದಿಲ್ಲ, ಬದಲಾಗಿ ಮುಂದಿನ ‘ಆರ್ಟೆಮಿಸ್ III’ ಮಿಷನ್ನಲ್ಲಿ ಚಂದ್ರನ ಮೇಲೆ ಇಳಿಯಲು ಅಗತ್ಯವಿರುವ ವ್ಯವಸ್ಥೆಗಳನ್ನು ಪರೀಕ್ಷಿಸಲಿದ್ದಾರೆ.
10 ದಿನಗಳ ಸುದೀರ್ಘ ಪ್ರಯಾಣದಲ್ಲಿ ಗಗನಯಾತ್ರಿಗಳು ಚಂದ್ರನನ್ನು ಸುತ್ತುಹಾಕಿ ಅಧ್ಯಯನ ನಡೆಸಿ ಭೂಮಿಗೆ ಮರಳಲಿದ್ದಾರೆ. ಭೂಮಿಯಿಂದ ಸುಮಾರು 4 ಲಕ್ಷ ಕಿಲೋಮೀಟರ್ ದೂರದವರೆಗೆ ಈ ನೌಕೆ ಪ್ರಯಾಣಿಸಲಿದೆ. ಇದು 1970ರಲ್ಲಿ ಅಪೊಲೊ 13 ಮಿಷನ್ ನಿರ್ಮಿಸಿದ್ದ ದಾಖಲೆಯನ್ನು (4,00,171 ಕಿ.ಮೀ) ಮೀರಿಸುವ ಸಾಧ್ಯತೆಯಿದೆ.
ಗಗನಯಾತ್ರಿಗಳು ಚಂದ್ರನ ಮೇಲ್ಮೈಯಿಂದ ಸುಮಾರು 6,400 ರಿಂದ 9,600 ಕಿಲೋಮೀಟರ್ ದೂರದಲ್ಲಿ ಚಂದ್ರನ ಹಿಂಬದಿಯ ಮೂಲಕ ಹಾದು ಹೋಗುತ್ತಿರುವುದು ಈ ಮಿಷನ್ನ ವಿಶೇಷತೆ. 10 ದಿನಗಳ ಇಡೀ ಮಿಷನ್ ಅವಧಿಯಲ್ಲಿ ಗಗನಯಾತ್ರಿಗಳು ಒಟ್ಟು 11,02,400 ಕಿಲೋಮೀಟರ್ಗಳಿಗಿಂತಲೂ ಹೆಚ್ಚು ದೂರವನ್ನು ಕ್ರಮಿಸಲಿದ್ದಾರೆ.
ತಂಡದಲ್ಲಿ ಯಾರಿದ್ದಾರೆ?
ರೀಡ್ ವೈಸ್ಮನ್ : ಮಿಷನ್ ಕಮಾಂಡರ್.
ವಿಕ್ಟರ್ ಗ್ಲೋವರ್ : ಪೈಲಟ್ (ಚಂದ್ರನತ್ತ ಪ್ರಯಾಣಿಸುವ ಮೊದಲ ಕಪ್ಪು ವರ್ಣೀಯ ವ್ಯಕ್ತಿ).
ಕ್ರಿಸ್ಟಿನಾ ಕೋಚ್ : ಮಿಷನ್ ಸ್ಪೆಷಲಿಸ್ಟ್ (ಚಂದ್ರನತ್ತ ಪ್ರಯಾಣಿಸುವ ಮೊದಲ ಮಹಿಳೆ).
ಜೆರೆಮಿ ಹ್ಯಾನ್ಸನ್ : ಮಿಷನ್ ಸ್ಪೆಷಲಿಸ್ಟ್ (ಕೆನಡಾ ಬಾಹ್ಯಾಕಾಶ ಸಂಸ್ಥೆ)
ಇಷ್ಟೊಂದು ಪ್ರಾಮುಖ್ಯತೆ ಯಾಕೆ?
1972ರಲ್ಲಿ ನಡೆದ ಅಪೊಲೊ 17 ಮಿಷನ್ ನಂತರ 54 ವರ್ಷಗಳ ಬಳಿಕ ಮಾನವಸಹಿತ ನೌಕೆ ಚಂದ್ರನತ್ತ ಪಯಣಸುತ್ತಿರುವುದರಿಂದ ಕುತೂಹಲ ಹೆಚ್ಚಾಗಿದೆ. ಚಂದ್ರನ ಮೇಲೆ ಸಂಶೋಧನೆ ನಡೆಸುವ ಮೂಲಕ ಮುಂದಿನ ದಿನಗಳಲ್ಲಿ ಮಂಗಳ ಗ್ರಹಕ್ಕೆ ಮಾನವರನ್ನು ಕಳುಹಿಸಲು ಬೇಕಾದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ನಾಸಾ ಹಾಕಿಕೊಂಡಿದೆ.
ಮುಖ್ಯ ಉದ್ದೇಶ ಏನು?
ಗಗನಯಾತ್ರಿಗಳೊಂದಿಗೆ ಒರಾಯನ್ ನೌಕೆಯು ಬಾಹ್ಯಾಕಾಶದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅಲ್ಲಿನ ಸೂರ್ಯನ ವಿಕಿರಣಗಳನ್ನು ಹೇಗೆ ತಡೆದುಕೊಳ್ಳುತ್ತದೆ ಎಂಬುದನ್ನು ಪರೀಕ್ಷಿಸುವುದು ಈ ಮಿಷನ್ನ ಗುರಿಯಾಗಿದೆ. ಇದು ಮುಂದಿನ ದಿನಗಳಲ್ಲಿ ಚಂದ್ರನ ಮೇಲೆ ಮಾನವರನ್ನು ಇಳಿಸುವ ಆರ್ಟೆಮಿಸ್-3 ಯೋಜನೆಗೆ ಸಹಾಯವಾಗಲಿದೆ.









