ಪದ್ಯಾಣ ಶ್ರಿ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಪುತ್ತೂರಿನಲ್ಲಿ ಸಮಿತಿ ಪದಾಧಿಕಾರಿಗಳ ಸಭೆ ; ನಾಳೆ ( ಮಾರ್ಚ್ 25 ) ಹೊರೆಕಾಣಿಕೆ ಕಛೇರಿ ಉದ್ಘಾಟನೆ – ಕಹಳೆ ನ್ಯೂಸ್

ಪುತ್ತೂರು : ಮಾರ್ಚ್ 30 ರಿಂದ ಏಪ್ರಿಲ್ 6 ತನಕ ವಿಜೃಂಭಣೆಯಿಂದ ನಡೆಯಲಿರುವ ಬಂಟ್ವಾಳ ತಾಲೂಕಿನ ಕರೋಪಾಡಿ – ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಾಲಯದ ಪುನ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಪುತ್ತೂರಿನಲ್ಲಿ ಸ್ವಾಗತ ಸಮಿತಿ ಹಾಗೂ ಹೊರಕಾಣಿಕೆ ಸಮಿತಿಯು ಈಗಾಗಲೇ ರಚನೆಗೊಂಡಿದ್ದು ,ಮಾ.24 ರಂದು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ಸ್ವಾಗತ ಸಮಿತಿ ಸಂಚಾಲಕರಾದ ಉಜ್ವಲ್ ಪ್ರಭು ಹಾಗೂ ಹೊರಕಾಣಿಕೆ ಸಮಿತಿಯ ಸಂಚಾಲಕರಾದ ದಯಾನಂದ ಶೆಟ್ಟಿ ಉಜಿರೆಮಾರು, ಉಭಯ ಅಧ್ಯಕ್ಷರಾದ ಗೋಪಾಲಕೃಷ್ಣ ಹೇರಳೆ ಇವರ ನೇತೃತ್ವದಲ್ಲಿ ಸಭೆ ನಡೆಯಿತು.
ಪದ್ಯಾಣದ ಶ್ರೀ ಮಹಾಲಿಂಗೇಶ್ವರನಿಗೆ ನೇಪಾಳದ ಗಂಡಕಿ, ಗಂಗಾ, ಯಮುನಾ, ಸರಸ್ವತಿ ಇತ್ಯಾದಿ ಅಖಂಡ ಭಾರತದ “ಏಕಾದಶ ಪುಣ್ಯ ನದಿಗಳ ತೀರ್ಥದೊಂದಿಗೆ” ಬ್ರಹ್ಮಕಲಶೋತ್ಸವವು ನೆರವೇರಲಿದ್ದು , ಈ ಪ್ರಯುಕ್ತ ಹಸಿರುವಾಣಿ ಮೆರವಣಿಗೆಯು ಮಾ.30ರಂದು ಬೆಳಗ್ಗೆ 11.30ಕ್ಕೆ ಉಪ್ಪಿನಂಗಡಿಯ ಸಂಗಮ ಕ್ಷೇತ್ರ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಿಂದ ಚಾಲನೆಗೊಂಡು, ಪುತ್ತೂರಿಗೆ ಆಗಮಿಸೋ ವೇಳೆ ನೆಕ್ಕಿಲಾಡಿ, ಬೆಳ್ಳಿಪ್ಪಾಡಿ, ಮಠಂತಬೆಟ್ಟು, ಕೆಮ್ಮಾಯಿ, ಮಾರ್ಗವಾಗಿ ಆದರ್ಶ ಆಸ್ಪತ್ರೆ ಮುಂಭಾಗದಿಂದ ಮಧ್ಯಾಹ್ನ 12.30ಕ್ಕೆ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ರಥ ಬೀದಿಗೆ ಪ್ರವೇಶಿಸಲಿದ್ದು,ಸಕಲ ಕಡೆಗಳಲ್ಲಿ ಸಿದ್ಧತೆಗಳನ್ನು ನಡೆಸಲಾಗಿದೆ. ಆ ಬಳಿಕ ಮಧ್ಯಾಹ್ನ 2.30ಕ್ಕೆ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಾಲಯ ಮೂಲಕ ಸಾಗಿ ಸಂಜೆ 3.30ರ ವೇಳೆಗೆ ಮಿತ್ತನಡ್ಕವನ್ನು ತಲುಪಲಿದೆ. ವಿವಿಧ ಭಜನಾ ತಂಡಗಳು, ಚೆಂಡೆ – ಆಕರ್ಷಕ ಕವಾಯತ್ತುಗಳೊಂದಿಗೆ ನಾಡಿನ ವಿವಿಧ ಮಠಾಧೀಶರು, ಗಣ್ಯರ ಉಪಸ್ಥಿತಿಯಲ್ಲಿ ಭವ್ಯ ಶೋಭಾಯಾತ್ರೆ ಮೂಲಕ ಏಕಾದಶ ಕಲಶ ತೀರ್ಥ ರಥ ಹಾಗೂ ಹಸಿರುವಾಣಿ ಮೆರವಣಿಗೆಯ ಅದ್ಧೂರಿ ಸ್ವಾಗತಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದೆ.
ಇದರ ಪೂರ್ವಭಾವಿಯಾಗಿ ಹೊರಕಾಣಿಕೆ ಸಂಗ್ರಹ ಕಚೇರಿಯನ್ನು ಮಾ.25ರಂದು ಮಹಾಲಿಂಗೇಶ್ವರ ದೇವಾಲಯದ ಬಳಿಯ ನಟರಾಜ ವೇದಿಕೆಯಲ್ಲಿ 10.00ಕ್ಕೆ ಹಿರಿಯರು , ತಜ್ಞ ವೈದ್ಯ ಡಾ. ಎಂ.ಕೆ. ಪ್ರಸಾದ್ ಭಂಡಾರಿಯವರು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಹಾಗೂ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಶ್ರೀ ಕ್ಷೇತ್ರ ಪದ್ಯಾಣಕ್ಕೆ ಹೊರಕಾಣಿಕೆ ನೀಡಲಿಚ್ಛಿಸುವವರು ಮಾ.30ರ ಮೊದಲು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ನಟರಾಜ ವೇದಿಕೆಯ ಸಂಕೀರ್ಣದಲ್ಲಿರುವ ಕಚೇರಿಯಲ್ಲಿ ನೀಡಬೇಕೆಂದು ಕೋರಲಾಗಿದೆ.
ಸ್ವಾಗತ ಸಮಿತಿ ತಂಡದ ಸಾಜ ರಾಧಾಕೃಷ್ಣ ಆಳ್ವ ಮತ್ತು ಡಾ. ಕೃಷ್ಣ ಪ್ರಸನ್ನ , ವಿದ್ಯಾ ಆರ್ ಗೌರಿ ,ಹೊರೆ ಕಾಣಿಕೆ ಸಮಿತಿಯ ಅಭಿಜಿತ್ ಕೊಡಿಪ್ಪಾಡಿ ಮತ್ತು ರಾಜೇಶ್ ರೈ ಪರ್ಪುಂಜ , ಸಂತೋಷ್ ಬೋನಂತಾಯ , ರಾಜೇಶ್ ಬನ್ನೂರು, ಅಜಿತ್ ರೈ ಹೊಸಮನೆ , ರಾಧಾಕೃಷ್ಣ ಬೋರ್ಕರ್ , ಶಿವಕುಮಾರ್ ಕಲ್ಲಿಮಾರ್ ಹಾಗೂ ಬ್ರಹ್ಮಲಕಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಶ್ಯಾಮ್ ಸುದರ್ಶನ್ ಹೊಸಮೂಲೆ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅರವಿಂದ ಪದ್ಯಾಣ ಇದ್ದರು.









