Thursday, April 23, 2026
ಬೆಂಗಳೂರುರಾಜ್ಯಸುದ್ದಿ

ಐಪಿಎಲ್ ಟಿಕೆಟ್ ಮಾರಾಟಕ್ಕೆ ಆರ್‌ಸಿಬಿ ಸಜ್ಜು :ಇನ್ನೆರೆಡು ದಿನದಲ್ಲಿ ಮಾರಾಟ ಪ್ರಕ್ರಿಯೆ ಶುರು -ಕಹಳೆ ನ್ಯೂಸ್

ಬೆಂಗಳೂರು: 2026ರ ಐಪಿಎಲ್ ಟೂರ್ನಿಗೆ (IPL 2026) ಕೌಂಟ್ ಡೌನ್ ಶುರುವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮೊದಲ ಹಂತದ ಪಂದ್ಯಗಳ ಟಿಕೆಟ್ ಮಾರಾಟ ಸದ್ಯದಲ್ಲೇ ಅಧಿಕೃತವಾಗಿ ಆರಂಭವಾಗಲಿದೆ. ಈ ಬಾರಿ ಆರ್‌ಸಿಬಿ ತನ್ನ ತವರಿನ ಪಂದ್ಯಗಳನ್ನು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲು ಕರ್ನಾಟಕ ಸರ್ಕಾರದಿಂದ ಅನುಮತಿ ಪಡೆದಿದೆ. ಇದರಿಂದ ಹೋಂ ಗ್ರೌಂಡ್ ಮ್ಯಾಚ್ ವೀಕ್ಷಣೆಗೆ ಟಿಕೆಟ್  ಖರೀದಿಗೆ ಭಾರೀ ಡಿಮ್ಯಾಂಡ್ ಶುರುವಾಗಲಿದೆ.
ಐಪಿಎಲ್ ಟೂರ್ನಿ ಹಿನ್ನೆಲೆ ಚಿನ್ನಸ್ವಾಮಿ ಮೈದಾನದಲ್ಲಿ ಸಿದ್ಧತೆಗಳು ಬಿರುಸುಗೊಂಡಿವೆ. ಇನ್ನೂ ಆರ್‌ಸಿಬಿ ಮ್ಯಾನೆಜ್‌ಮೆಂಟ್ ಇನ್ನೆರೆಡು ದಿನದಲ್ಲಿ ಅಧಿಕೃತವಾಗಿ ಟಿಕೆಟ್ (RCB Ticket) ಮಾರಾಟ ಪ್ರಕ್ರಿಯೆಯನ್ನ ಆರಂಭಿಸಲಿದೆ. ಈ ಬಗ್ಗೆ ತನ್ನ ಎಕ್ಸ್ ಖಾತೆಯಲ್ಲಿ ಆರ್‌ಸಿಬಿ ಹಂಚಿಕೊಂಡಿದೆ. ಆರ್‌ಸಿಬಿ ವೆಬ್‌ಸೈಟ್ ಹಾಗೂ ಆ್ಯಪ್‌ನಲ್ಲಿ ಮಾತ್ರ ಟಿಕೆಟ್‌ಗಳು ಲಭ್ಯವಿರಲಿವೆ ಎಂದು ತಿಳಿಸಿದೆ.

ಸಾಮಾನ್ಯವಾಗಿ ಮೊದಲು ಆರ್‌ಸಿಬಿ ಆ್ಯಪ್‌ನ ಸದಸ್ಯರಿಗೆ ಟಿಕೆಟ್ ನೀಡಲಾಗುತ್ತದೆ. ನಂತರ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುತ್ತದೆ. ಟಿಕೆಟ್, ದರ, ಗೇಟ್‌ಗಳ ನಕ್ಷೆ, ಎಂಟ್ರಿ, ಎಕ್ಸಿಟ್ ಬಗ್ಗೆ ಸೋಮವಾರ ಅಧಿಕೃತವಾಗಿ ಮಾಹಿತಿ ನೀಡುವ ಸಾಧ್ಯತೆಯಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾರ್ಚ್ 28ರಂದು ಈ ಆವೃತ್ತಿಯ ಮೊದಲ ಪಂದ್ಯ ನಡೆಯಲಿದ್ದು, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಸೆಣಸಾಡಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನಂತರ ಏಪ್ರಿಲ್ 5 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂದ್ಯ ನಡೆಯಲಿದೆ. ತವರಿನಲ್ಲಿ ನಡೆಯಲಿರುವ ಈ ಪಂದ್ಯಗಳಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಕ್ರೀಡಾಂಗಣದ ಬಳಿ ಇತ್ತೀಚೆಗೆ ನಡೆದ ಘಟನೆಗಳ ನಂತರ ಪಂದ್ಯಗಳು ನಡೆಯುವ ಬಗ್ಗೆ ವದಂತಿಗಳಿದ್ದವು. ಈಗ ಪೊಲೀಸ್ ಮತ್ತು ಆಡಳಿತ ಮಂಡಳಿಯಿಂದ ಕ್ಲಿಯರೆನ್ಸ್ ಸಿಕ್ಕಿದ್ದು, ಪಂದ್ಯಗಳು ಅದ್ಧೂರಿಯಾಗಿ ನಡೆಯಲಿವೆ.

ಐಪಿಎಲ್ ಟಿಕೆಟ್ ಇದ್ರೆ ಮೆಟ್ರೋ ಪ್ರಯಾಣ ಉಚಿತ:

ಮೂರನೇ ವ್ಯಕ್ತಿಯ ಆ್ಯಪ್‌ಗಳು, ವೆಬ್‌ಸೈಟ್‌ಗಳಿಂದ ಟಿಕೆಟ್ ಖರೀದಿಸಬೇಡಿ, ಅವು ಅಧಿಕೃತವಲ್ಲ ಅಂತ ಆರ್‌ಸಿಬಿ ಮ್ಯಾನೆಜ್‌ಮೆಂಟ್ ಎಚ್ಚರಿಸಿದೆ. ಇನ್ನೂ ಆರ್‌ಸಿಬಿ ಟಿಕೆಟ್ ಹೊಂದಿದವರಿಗೆ ಉಚಿತ ಮೆಟ್ರೋ ವ್ಯವಸ್ಥೆಯೂ ಇರಲಿದೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳನ್ನು ನೋಡಲು ಹೋಗುವವರಿಗೆ ಮೆಟ್ರೋದಲ್ಲಿ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುವ ಬಗ್ಗೆ ಸಿದ್ಧತೆಗಳು ನಡೆಯುತ್ತಿವೆ. ಇತ್ತ ಟಿಕೆಟ್ ದರವನ್ನ ಆರ್‌ಸಿಬಿ ಈವರೆಗೆ ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಕಳೆದ ಸೀಸನ್‌ನಲ್ಲಿ ಟಿಕೆಟ್ ಬೆಲೆ 2,300 ರೂ.ನಿಂದ 42,000 ರೂ.ವರೆಗೆ ಇದ್ದವು.

ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತ ಮತ್ತೆ ಮರುಕಳಿಸದಿರಲು ಕಠಿಣ ಕ್ರಮ ಅನುಸರಿಸಲಾಗುತ್ತಿದೆ. ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆಯೂ ನಕ್ಷೆ ರೆಡಿ ಮಾಡಿಕೊಳ್ಳಲಾಗಿದೆ. ಮೈದಾನಕ್ಕೆ ಬರುವವರಿಗೆ ಲಿಂಕ್ ರಸ್ತೆ, ಕಬ್ಬನ್ ರಸ್ತೆಯಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಗರುಡಮಾಲ್, ಸೇಂಟ್ ಜೋಸೆಫ್ ಬಾಯ್ಸ್ ಹೈಸ್ಕೂಲ್, ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್, ಫ್ರೀಡಂಪಾರ್ಕ್ನಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ಇನ್ನೂ ಈ ಪಾರ್ಕಿಂಗ್‌ಗೆ ಮೊದಲೇ ಬುಕ್ಕಿಂಗ್ ಮಾಡಿಕೊಳ್ಳಬೇಕಿದೆ. ಕಳೆದ ವರ್ಷ ನಡೆದ ಕರಾಳ ನೆನಪನ್ನ ಮರೆತು, ಸುರಕ್ಷಿತವಾಗಿ ಪಂದ್ಯಗಳನ್ನು ಆಯೋಜಿಸಲು ಕೆಎಸ್‌ಸಿಎ ಕೂಡ ತುಂಬಾ ಎಚ್ಚರಿಕೆ ವಹಿಸಿದೆ.