ಬೆಳ್ತಂಗಡಿ: “ಶಾಸಕರು ದಲಿತರ ಮನೆಗೆ ಹೋಗಿ ಊಟ ಮಾಡಿದ್ರೆ ಸಂವಿಧಾನ ವಿರೋಧಿನಾ? ರಕ್ಷಿತ್ ಶಿವರಾಂ ವಿರುದ್ಧ ಬೆಳ್ತಂಗಡಿ ದಲಿತ ಸಮುದಾಯದ ಆಕ್ರೋಶ!-ಕಹಳೆ ನ್ಯೂಸ್

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಈಗ ‘ಸಾಮರಸ್ಯ’ದ ಹೆಸರಿನಲ್ಲಿ ದೊಡ್ಡ ರಾಜಕೀಯ ಸಮರವೇ ಶುರುವಾಗಿದೆ. ಶಾಸಕ ಹರೀಶ್ ಪೂಂಜಾ ಅವರ ‘ಸಾಮರಸ್ಯ ಸಂಕ್ರಾಂತಿ’ ಅಭಿಯಾನಕ್ಕೆ ಈಗ ಕಾಂಗ್ರೆಸ್ ನಾಯಕ ರಕ್ಷಿತ್ ಶಿವರಾಮ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಈ ಆಕ್ಷೇಪಕ್ಕೆ ಸ್ವತಃ ದಲಿತ ಸಮುದಾಯದ ಮುಖಂಡರೇ ತಿರುಗೇಟು ನೀಡಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ನೂರನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ತಾಲೂಕಿನಾದ್ಯಂತ ‘ಸಾಮರಸ್ಯ ಸಂಕ್ರಾಂತಿ’ ಹಮ್ಮಿಕೊಂಡಿದ್ದರು. ತಾಲೂಕಿನ 129 ದಲಿತ ಕುಟುಂಬಗಳ ಮನೆಗೆ ಭೇಟಿ ನೀಡಿ, ಅವರೊಂದಿಗೆ ಕುಳಿತು ಊಟ ಮಾಡಿ, ಕಷ್ಟ-ಸುಖ ವಿಚಾರಿಸುವುದು ಈ ಅಭಿಯಾನದ ಉದ್ದೇಶವಾಗಿತ್ತು. ಬೆಳಿಗ್ಗೆ 8 ಗಂಟೆಯಿಂದಲೇ ಆರಂಭವಾಗುತ್ತಿದ್ದ ಈ ಕಾರ್ಯಕ್ರಮದಲ್ಲಿ ಶಾಸಕರು ದಿನಕ್ಕೆ 10 ರಿಂದ 15 ಮನೆಗಳಿಗೆ ಭೇಟಿ ನೀಡುತ್ತಿದ್ದರು.ಆದರೆ ಈ ನಡೆಯನ್ನು ಕಾಂಗ್ರೆಸ್ ನಾಯಕ ರಕ್ಷಿತ್ ಶಿವರಾಮ್ ಕಟುವಾಗಿ ಟೀಕಿಸಿದ್ದಾರೆ. “ದಲಿತರ ಮನೆಗೆ ಹೋಗಿ ಊಟ ಮಾಡುವುದು ಸಂವಿಧಾನ ವಿರೋಧಿ ಮತ್ತು ಸಮುದಾಯಕ್ಕೆ ಮಾಡುವ ಅಪಮಾನ” ಎಂಬ ಅರ್ಥದಲ್ಲಿ ರಕ್ಷಿತ್ ಶಿವರಾಮ್ ಹೇಳಿಕೆ ನೀಡಿದ್ದರು. ಈ ಹೇಳಿಕೆ ಈಗ ಬೆಳ್ತಂಗಡಿಯಲ್ಲಿ ದೊಡ್ಡ ಕಿಡಿ ಹೊತ್ತಿಸಿದೆ.
ರಕ್ಷಿತ್ ಶಿವರಾಮ್ ಅವರ ಈ ಮಾತಿಗೆ ದಲಿತ ಸಮುದಾಯದ ಪ್ರಮುಖರು ಈಗ ದಾಖಲೆ ಸಮೇತ ಉತ್ತರ ನೀಡಿದ್ದಾರೆ.
– ಇದು ಕೇವಲ ರಾಜಕೀಯವಲ್ಲ, ತುಳುನಾಡಿನ ಸಂಪ್ರದಾಯದಂತೆ ಶಾಸಕರು ನಮ್ಮ ಮನೆಗೆ ನೆಂಟರಂತೆ ಬಂದಿದ್ದಾರೆ.
– ಪುದುವೆಟ್ಟುವಿನಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಗ್ರಾಮ ಪಂಚಾಯತ್ ಸದಸ್ಯರ ಮನೆಯಲ್ಲಿಯೇ ಶಾಸಕರು ಊಟ ಮಾಡಿದ್ದಾರೆ. ಹಾಗಿರುವಾಗ ಇದರಲ್ಲಿ ರಾಜಕೀಯ ಎಲ್ಲಿದೆ?
– ಶಾಸಕರು ನಮ್ಮ ಮನೆಗೆ ಬರುವುದನ್ನು ನಾವು ಹೃದಯಪೂರ್ವಕವಾಗಿ ಸ್ವಾಗತಿಸಿದ್ದೇವೆ. ನಮ್ಮನ್ನು ‘ಬುದ್ಧಿ ಇಲ್ಲದವರು’ ಎಂದು ಬಿಂಬಿಸುವುದನ್ನು ರಕ್ಷಿತ್ ಶಿವರಾಮ್ ನಿಲ್ಲಿಸಲಿ ಎಂದು ಮುಖಂಡರು ಕಿಡಿಕಾರಿದ್ದಾರೆ.








