
ಈ ಕೃತ್ಯವು ಸ್ಥಳೀಯರಲ್ಲಿ ತೀವ್ರ ಗೊಂದಲ ಮೂಡಿಸಿದ್ದು, ಒಂದೆಡೆ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಚಿರತೆ ದಾಳಿಯಿಂದ ಕರು ಸಾವಿಗೀಡಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಎಪಿಎಂಸಿ ಜಾನುವಾರು ಮಾರುಕಟ್ಟೆ ಬಳಿಯೇ ಈ ಕೃತ್ಯ ನಡೆದಿರುವುದು ಸಾರ್ವಜನಿಕರಲ್ಲಿ ಎರಡು ಬಗೆಯ ಚರ್ಚೆಗೆ ಕಾರಣವಾಗಿದೆ. ಅನಾಮಿಕ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಕರುವಿನ ತಲೆ ಕತ್ತರಿಸಿ ಗೋಹತ್ಯೆ ಮಾಡಿ, ದೇಹವನ್ನು ಇಲ್ಲಿ ಬಿಸಾಡಿ ಹೋಗಿರುವ ಸಾಧ್ಯತೆ ಇದೆ. ಕರುವಿನ ತಲೆಯನ್ನು ಚೀಲದಲ್ಲಿ ತುಂಬಿಕೊಂಡು ತಂದು ಬಿಸಾಡಿರುವ ಶಂಕೆ ವ್ಯಕ್ತವಾಗಿದೆ.
ಮತ್ತೊಂದು ವಾದದ ಪ್ರಕಾರ, ಇತ್ತೀಚೆಗೆ ಅವಳಿ ನಗರದ ಸುತ್ತಮುತ್ತ ಕಾಣಿಸಿಕೊಂಡಿದ್ದ ಚಿರತೆಯೇ ಈ ಕೃತ್ಯ ಎಸಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಚಿರತೆಯು ಕೊಂದ ನಂತರ ದೇಹವನ್ನು ಎಳೆದು ತಂದಿರಬಹುದು ಎಂದು ಊಹಿಸಲಾಗಿದೆ. ಕರುವಿನ ದೇಹ ಪತ್ತೆಯಾದ ಕೂಡಲೇ ಸುದ್ದಿ ತಿಳಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.











