
ಮಂಡ್ಯ : ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆಯಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿ ರಂಪಾಟ ಮಾಡಿರುವ ಘಟನೆ ಮಂಡ್ಯದ ಶ್ರೀರಂಗಪಟ್ಟಣ ಬಸ್ ನಿಲ್ದಾಣದಲ್ಲಿ ನಡೆದಿದೆ.
ಶಕ್ತಿ ಯೋಜನೆಯಡಿ ಮೈಸೂರಿನಿಂದ ಮಹಿಳೆಯೊಬ್ಬರು ತುಮಕೂರಿಗೆ ಟಿಕೆಟ್ ಪಡೆದಿದ್ದರು, ಆದರೆ ಶ್ರೀರಂಗಪಟ್ಟಣದ ಬಸ್ ನಿಲ್ದಾಣದಲ್ಲೇ ಮಹಿಳೆ ಇಳಿದು ಹೋಗಿದ್ದಾರೆ, ಇದನ್ನು ಗಮನಿಸಿದ ಬಸ್ ಕಂಡಕ್ಟರ್ ನೀವು ತುಮಕೂರಿಗೆ ಟಿಕೆಟ್ ಪಡೆದಿರುವುದು ಮಧ್ಯದಲ್ಲಿ ಇಳಿಯುವಂತಿಲ್ಲ ಎಂದು ತಿಳಿಸಿದ್ದಾರೆ.
ತುಮಕೂರಿಗೆ ಟಿಕೆಟ್ ಪಡೆದಿರುವುದು ಹೀಗೆ ಮಧ್ಯದಲ್ಲಿ ಇಳಿದರೆ ಚೆಕಿಂಗ್ ಬಂದಾಗ ತೊಂದರೆಯಾಗುತ್ತದೆ ಎಂದು ತಿಳಿಸಿದ್ದಾರೆ. ಆದರೂ ಕೂಡ ಮಹಿಳೆ ಹೋಗಲು ಮುಂದಾದಾಗ ಆಕೆಯನ್ನು ಟಿಸಿ ಬಳಿ ಕರೆದುಕೊಂಡು ಹೋಗಿದ್ದಾರೆ.
ಬಸ್ ನಿಲ್ದಾಣದಲ್ಲಿದ್ದ ಟಿಸಿ ಬಳಿ ಕರೆದುಕೊಂಡು ಹೋಗಿದ್ದಕ್ಕೆ ಕೆಂಡಾಮಂಡಲವಾದ ಮಹಿಳೆ ಈ ವೇಳೆ ನಿಲ್ದಾಣದಲ್ಲಿ ಕಂಡಕ್ಟರ್ ಕುತ್ತಿಗೆ ಪಟ್ಟಿ ಹಿಡಿದು ಎಳೆದಾಡಿ ರಂಪಾಟ ಮಾಡಿದ್ದಾಳೆ. ಅಷ್ಟೇ ಅಲ್ಲದೇ ಒಂದೆರಡು ಪೆಟ್ಟು ಹೊಡೆದಿದ್ದಾಳೆ.
ಕೂಡಲೇ ಜನ ಸೇರಿ ವಿಡಿಯೋ ಮಾಡುವಂತ್ತಿದ್ದಂತೆ ಮಹಿಳೆ ಸ್ಥಳದಿಂದ ಪರಾರಿಯಾಗಿದ್ದಾಳೆ. ಸದ್ಯ ಶಕ್ತಿ ಯೋಜನೆ ದುರುಪಯೋಗ ಮಾಡಿ ಕೊಳ್ಳುತ್ತಿರುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ.
ಇನ್ನು ನಿರ್ವಾಹಕರ ಮೇಲೆ ಪದೆ ಪದೇ ಇಂತಹ ದೌರ್ಜನ್ಯ ನಡೆಯುತ್ತಿದ್ದರು ನೆರವಿಗೆ ಬಾರದ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಲಾಗಿದ್ದು, ಸದ್ಯ ಮಹಿಳೆಯ ರಂಪಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.









