ನ.8ರಂದು ಬೆಂಗಳೂರು-ಎರ್ನಾಕುಲಂ ಸೇರಿದಂತೆ 4 ವಂದೇ ಭಾರತ್ ರೈಲುಗಳಿಗೆ ಮೋದಿ ಚಾಲನೆ – ಕಹಳೆ ನ್ಯೂಸ್

ನವದೆಹಲಿ: ನವೆಂಬರ್ 8ರಂದು ಎರ್ನಾಕುಲಂ-ಬೆಂಗಳೂರು ಸೇರಿದಂತೆ ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.
ನವೆಂಬರ್ 8ರಂದು ವಾರಾಣಸಿಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಈ ವೇಳೆ ನಾಲ್ಕು ಹೊಸ ವಂದೇ ಭಾರತ್ ರೈಲುಗಳ ಸಂಚಾರವನ್ನು ಉದ್ಘಾಟಿಸಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯದ ಅಧಿಕೃತ ಪ್ರಕಟಣೆ ತಿಳಿಸಿದೆ.
ನಾಲ್ಕು ಹೊಸ ವಂದೇ ಭಾರತ್ ರೈಲುಗಳ ವಿವರ: ಬನಾರಸ್-ಖಜುರಾಹೊ, ಲಖನೌ-ಸಹಾರನ್‌ಪುರ, ಫಿರೋಜ್‌ಪುರ-ದೆಹಲಿ, ಎರ್ನಾಕುಲಂ-ಬೆಂಗಳೂರು
ಎರ್ನಾಕುಲಂ-ಬೆಂಗಳೂರು ಮಾರ್ಗದಲ್ಲಿ ಹೊಸ ವಂದೇ ಭಾರತ್ ರೈಲಿನ ಆಗಮನದೊಂದಿಗೆ ಪ್ರಯಾಣದ ಅವಧಿ ಎರಡು ತಾಸುಗಳಷ್ಟು ಕಡಿಮೆಯಾಗಲಿದೆ. ಎರಡು ಗಮ್ಯಸ್ಥಾನಗಳ ನಡುವಣ ದೂರವನ್ನು 8 ಗಂಟೆ 40 ನಿಮಿಷಗಳಲ್ಲಿ ಕ್ರಮಿಸಲಿದೆ.
ಇದರಿಂದ ಐಟಿ, ವಾಣಿಜ್ಯ, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ಹೆಚ್ಚಿನ ನೆರವನ್ನುಂಟು ಮಾಡಲಿದೆ.
ಈ ಮಾರ್ಗವು ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಆರ್ಥಿಕ ಹಾಗೂ ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.









