
ರಾಂಚಿ : ಸೋಮವಾರ ( ಸೆ . 15 ) ಬೆಳಿಗ್ಗೆ ಭದ್ರತಾ ಪಡೆಗಳೊಂದಿಗೆ ನಡೆದ ಎನ್ ಕೌಂಟರ್ ನಲ್ಲಿ ಮೂವರು ನಕ್ಸಲರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಹತ್ಯೆಯಾದ ನಕ್ಸಲರಲ್ಲಿ ಒಬ್ಬರಾದ ಸಹದೇವ್ ಸೊರೆನ್ ತಲೆಗೆ 1 ಕೋಟಿ ರೂ . ಬಹುಮಾನ ಘೋಷಣೆ ಮಾಡಲಾಗಿತ್ತು . ಅದರಂತೆ ಸೋಮವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಗೋಹರ್ ಪೊಲೀಸ್ ಠಾಣೆ ಪ್ರದೇಶದ ಪಂಟಿತ್ರಿ ಅರಣ್ಯದಲ್ಲಿ ಈ ಎನ್ ಕೌಂಟರ್ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ .
ಅತ್ಯಂತ ಅಪಾಯಕಾರಿ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಸಹದೇವ್ ಸೊರೆನ್ ಸೇರಿದಂತೆ ಆತನ ಜೊತೆಗಿದ್ದ ಇಬ್ಬರು ಸಹಚರರು ಈ ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿದ್ದು ಸಹದೇವ್ ಸೊರೆನ್ ಮತ್ತು ಇತರ ಇಬ್ಬರು ಮಾವೋವಾದಿಗಳ ಶವಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ತಿಳಿಸಿದ್ದಾರೆ .
ಈ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು ರಾಜ್ಯದಲ್ಲಿ ನಕ್ಸಲ್ ಕಾರ್ಯಾಚರಣೆಯನ್ನು ಸಂಪೂರ್ಣ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಭದ್ರತಾ ಪಡೆ , ಪೊಲೀಸರ ತಂಡದ ಜೊತೆಗೆ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು ಈ ವೇಳೆ ನಕ್ಸಲರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆ ನಕ್ಸಲರ ಮೇಲೆ ಗುಂಡಿನ ದಾಳಿ ನಡೆಸಿದೆ ಪರಿಣಾಮ ನಕ್ಸಲ್ ನಾಯಕ ಸಹದೇವ್ ಸೋರೆನ್ ಸೇರಿದಂತೆ ಮೂವರು ನಕ್ಸಲರು ಹತರಾಗಿದ್ದಾರೆ .
ಮುಂದುವರೆದ ಶೋಧ ಕಾರ್ಯ :
ಎನಕೌಂಟರ್ ನಲ್ಲಿ ಮೂವರು ನಕ್ಸಲರು ಹತರಾಗಿದ್ದು ಇದರ ಜೊತೆಗೆ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ .









