ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಇದರ ಸಹಯೋಗದಲ್ಲಿ ನಾದಾವಧಾನ ಪ್ರತಿಷ್ಠಾನ, ಕುಂದಾಪುರ ಅರ್ಪಿಸುವ ಯಕ್ಷಗಾನ ಕಾರ್ಯಾಗಾರ – ಕಹಳೆ ನ್ಯೂಸ್

ಬೆಂಗಳೂರು : ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಇದರ ಸಹಯೋಗದಲ್ಲಿ ನಾದಾವಧಾನ ಪ್ರತಿಷ್ಠಾನ, ಕುಂದಾಪುರ ಅರ್ಪಿಸುವ ಯಲ್ಲಾಪುರದ U.ಏ.ನೇಚರ್ಸ್ ನಲ್ಲಿ ನಾದಾವಧಾನ ಸಂಸ್ಥೆ ಏರ್ಪಡಿಸಿದ ಮೂರು ದಿನಗಳ ಯಕ್ಷಗಾನ ಕಾರ್ಯಗಾರ ನಡೆಯಿತು.
ಇದಕ್ಕೆ ಯಕ್ಷಗಾನ ಎಕಾಡಮಿಯ ಸಂಪೂರ್ಣ ಸಹಕಾರವಿತ್ತು. ನಾದಾವಧಾನದ ವಿದ್ಯಾರ್ಥಿಗಳು ಮತ್ತು ಸ್ಥಳೀಯವಾಗಿ ಬೆಳೆಯುವ ಪ್ರತಿಭೆಗಳಿಗಾಗಿ ನಡೆದ ಈ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ MN ಹೆಗಡೆ,ಹಳುವಳ್ಳಿ.ಯಕ್ಷರಂಗ ಪತ್ರಿಕೆಯ ಕಡತೋಕ ಗೋಪಾಲಕೃಷ್ಣ ಭಾಗವತ ಇವರು ಶಿಬಿರಗಳ ಅಗತ್ಯ ಮತ್ತು ಮಹತ್ವಗಳ ಕುರಿತು ಮಾತನಾಡಿ ನಾದಾವಧಾನ ಸಂಸ್ಥೆಯ ಕಾರ್ಯದ ಕುರಿತು ಶ್ಲಾಘನೆಯನ್ನು ವ್ಯಕ್ತಪಡಿಸಿದರು.
ಯಕ್ಷಗಾನ ಅಕಾಡೆಮಿ ಸದಸ್ಯರಾದ ವಿದ್ಯಾಧರ ರಾವ್ ಜಲವಳ್ಳಿ ಅವರು ಇಂತಹ ಕಾರ್ಯಾಗಾರಕ್ಕೆ ಅಕಾಡೆಮಿಯ ಸಂಪೂರ್ಣ ಬೆಂಬಲ ಇದೆ ಎಂದು ತಿಳಿಸಿದರು. ಗುರುಗಳಾದ ಎ.ಪಿ.ಫಾಟಕ್, NG ಹೆಗಡೆ, ಅಶ್ವಿನಿ ಕೊಂಡದಕುಳಿಯವರು ಸಭೆಯಲ್ಲಿ ಉಪಸ್ಥಿತರಿದ್ದರು.
ದಂತಳಿಗೆ ಅನಂತ ಹೆಗಡೆಯವರು ಯಕ್ಷಗಾನ ಕಾವ್ಯದಲ್ಲಿ ಬರುವ ಸಾಹಿತ್ಯದ ಸೌಂದರ್ಯ ,ಛಂದೋಭಂಗವಾಗದಂತೆ ಹಾಡುವ,ಕಾವ್ಯ ಕಟ್ಟುವ ಕುರಿತು ವಿವರಿಸಿದರು.ಸದಾಶಿವ ಮಲವಳ್ಳಿ, ನಾಗರಾಜ ಕುಂಕಿಪಾಲ್ ಇವರು ಯಕ್ಷಗಾನದ ರಂಗದ ಚಲನೆ, ಆಗಮನ ನಿರ್ಗಮನಗಳ ಕುರಿತು ವಿವರಿಸುತ್ತಾ ಕೆಲವು ಆಖ್ಯಾನಗಳನ್ನು ಆಡಿ ತೋರಿಸಿದರು.
ಶಿವರಾಮ ಭಾಗವತರು ಪ್ರಸಂಗ ಸಾಹಿತ್ಯವನ್ನು ಓದಿ ಅರ್ಥ ವಿವರಿಸಿದರು.ಫಾಟಕ್ ಮತ್ತು NG ಹೆಗಡೆಯವರು ಪದ್ಯಗಳಲ್ಲಿ ಬರುವ ಮತ್ತು ತಾಳಮಾಲಿಕೆಯಲ್ಲಿ ಬರುವ ಸಣ್ಣ ಮುಕ್ತಾಯ ಮತ್ತು ಅದರ ಸ್ಥಾನ ಅದರ ಶಾಸ್ತ್ರಿಯತೆಯ ಕುರಿತು ವಿವರಿಸಿದರು.ಲಯದ ವಿಸ್ತರಣೆ,ಕಾಯ್ದುಕೊಳ್ಳಬೇಕಾದ ಲಯ ಇದರ ಕುರಿತ ಚರ್ಚೆಗಳೂ ನಡೆದವು.
ಗಣೇಶ ಹಳುವಳ್ಳಿ ಮತ್ತು ಪ್ರಸನ್ನ ಹೆಗ್ಗಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಾದನಗಳ ಕುರಿತ ಅನೇಕ ಸಂಗತಿಗಳನ್ನು ಶಿಬಿರಾರ್ಥಿಗಳಿಗೆ ಮನದಟ್ಟಾಗುವಂತೆ ತಿಳಿಸಿಕೊಟ್ಟರು.
ಅಶ್ವಿನಿ ಕೊಂಡದಕುಳಿಯವರು ಯಕ್ಷಗಾನದ ಶಾಸ್ತ್ರೀಯ ಸ್ಥಾನಮಾನ ಅದರ ಸಿರಿವಂತಿಕೆಯನ್ನು ಪಡೆಯುವಲ್ಲಿ ನಾವು ಪಡಬೇಕಾದ ಶ್ರಮದ ಕುರಿತು ವಿವರಿಸುತ್ತಾ ನೃತ್ತ, ನೃತ್ಯ,ನಾಟ್ಯವೆಂದರೇನೆAದು ತಿಳಿಸಿಕೊಟ್ಟರು.ಪ್ರಾಥಮಿಕ ಅಭ್ಯಾಸಕ್ಕೆ ಹೆಜ್ಜೆಗಳ ಪ್ರಾತ್ಯಕ್ಷಿಕೆಯೂ ನಡೆಯಿತು.
ಹಿರಿಯರಾದ MN ಹೆಗಡೆ ಮತ್ತು ಡಾ.D.K ಗಾಂವ್ಕರ್ ಅವರು ಸುಂದರವಾದ ಒಂದೆರಡು ಯಕ್ಷಗಾನ ತಾಳಮದ್ದಳೆಯ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.
ಈ ಮೇಲಿನ ಎಲ್ಲ ಕಾರ್ಯಕ್ರಮಗಳಲ್ಲಿ ನಾದಾವಧಾನದ ವಿದ್ಯಾರ್ಥಿಗಳೇ ಹಿಮ್ಮೇಳದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟರು.
ಮೂರು ದಿನಗಳ ಈ ಕಾರ್ಯಾಗಾರದಲ್ಲಿ UK ನೇಚರ್ಸ್ ಮಾಲಕ ನಿರಂಜನ ಭಟ್ಟರ ಸಂಪೂರ್ಣ ಸಹಕಾರವಿತ್ತು .









