ಪ್ರವಾಹದಿಂದ ನಷ್ಟ ಅನುಭವಿಸಿದ್ದವರಿಗೆ ಗುಡ್‌ನ್ಯೂಸ್ ಕೊಟ್ಟ ಕಂದಾಯ ಸಚಿವ ಕಷ್ಣಬೈರೇಗೌಡ – ಕಹಳೆ ನ್ಯೂಸ್

ಬೆಂಗಳೂರು: ನೆರೆ ಹಾವಳಿಯಿಂದ ಸಂಭವಿಸಿರುವ ಆಸ್ತಿ ಹಾಗೂ ಜೀವಹಾನಿಗೆ ತಕ್ಷಣ ಪರಿಹಾರ ಪಾವತಿಸುವಂತೆ ಕಂದಾಯ ಸಚಿವ ಕೃಷ್ಣಭೈರೇಗೌಡ ಸೂಚಿಸಿದ್ದಾರೆ.
ಹಾಸನಕ್ಕೆ ಕಾರಿನಲ್ಲಿ ಪ್ರಯಾಣಿಸುವಾಗ ಸಮಯದ ಸದ್ಬಳಕೆಗಾಗಿ ಪ್ರಯಾಣದ ಮಧ್ಯೆಯೇ ಮಳೆ ಹಾನಿ ಹಾಗೂ ಬರ ಪರಿಸ್ಥಿತಿಯ ಬಗ್ಗೆ ಎಲ್ಲಾ ಜಿಲ್ಲಾಧಿಕಾರಿಗಳು, ವಿಪತ್ತು ನಿರ್ವಹಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರ ಜೊತೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸಭೆ ನಡೆಸಿದರು.
ರಾಜ್ಯಾದ್ಯಂತ ಈ ವರ್ಷದ ಮಳೆಯ ಪ್ರಮಾಣದ ಬಗ್ಗೆ ಅಧಿಕಾರಿಗಳ ಜೊತೆ ಸಚಿವರು ಚರ್ಚಿಸಿದರು. ಪ್ರಸ್ತುತ ಸಾಲಿನಲ್ಲಿ ಉತ್ತಮ ಮಳೆಯಾಗಿದ್ದು, ಬೀದರ್ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಮಾತ್ರ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಉಳಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ಜಲಾಶಯಗಳು ಬಹುತೇಕ ಭರ್ತಿಯಾಗಿವೆ ಎಂದು ಅಧಿಕಾರಿಗಳು ವಿವರಿಸಿದರು.
ಕೆಲ ಜಿಲ್ಲೆಗಳಲ್ಲಿ ಮಾತ್ರ ಮಳೆಯಿಂದಾಗಿ ಬೆಳೆ ನಾಶವಾಗಿದ್ದು, ಶೀಘ್ರ ಈ ಮಾಹಿತಿಗಳನ್ನು ಫ್ರೂಟ್‌್ಸ ತಂತ್ರಾಂಶದಲ್ಲಿ ನಮೂದಿಸುವಂತೆ ಸಚಿವರು ಸೂಚಿಸಿದರು.
ಮಳೆ ಹಾಗೂ ಸಿಡಿಲಿನ ಕಾರಣಕ್ಕೆ 51 ಜನ ಮೃತಪಟ್ಟಿದ್ದಾರೆ, 329 ಜಾನುವಾರುಗಳು ಸಾವನ್ನಪ್ಪಿವೆ. ಮಳೆಗೆ 121 ಮನೆಗಳೂ ಸಂಪೂರ್ಣ ಕುಸಿದಿದ್ದು ಎಲ್ಲರಿಗೂ ಶೀಘ್ರ ಪರಿಹಾರ ನೀಡಲು ಸಚಿವ ಕೃಷ್ಣ ಭೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.









