Sunday, April 26, 2026
ರಾಜಕೀಯ

ಕ್ಷೇತ್ರದ ಜನರು ಮತ್ತೊಮ್ಮೆ ಆಶೀರ್ವಾದ ಮಾಡಿದರೆ ದುಪ್ಪಟ್ಟು ಅಭಿವೃದ್ಧಿ ಮಾಡುತ್ತೇನೆ – ರೈ

ಬಂಟ್ವಾಳ, ಎ 26: ಕ್ಷೇತ್ರದ ಜನರು ಮತ್ತೊಮ್ಮೆ ಆಶೀರ್ವಾದ ಮಾಡಿದರೆ ದುಪ್ಪಟ್ಟು ಅಭಿವೃದ್ಧಿ ಮಾಡುತ್ತೇನೆ ಎಂದು  ಸಚಿವ  ಬಿ. ರಮಾನಾಥ ರೈ ತಿಳಿಸಿದ್ದಾರೆ.

ಬಿ.ಸಿ.ರೋಡ್‌ನಲ್ಲಿರುವ ಪಕ್ಷದ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಕ್ಕಿದ ಅವಕಾಶವನ್ನು ಕ್ಷೇತ್ರದ ಜನರ ಅಭಿವೃದ್ಧಿಗಾಗಿ ಸದುಪಯೋಗಪಡಿಸಿಕೊಂಡ ತೃಪ್ತಿ ತನಗಿದೆ. ಈ ಬಾರಿಯು ಮತದಾರರು ಗರಿಷ್ಠ ಮತಗಳಿಂದ ಆಶೀರ್ವಾದ ಮಾಡುವ ನಿರೀಕ್ಷೆಯಿದೆ. ಕ್ಷೇತ್ರದ ಜನರು ಮತ್ತೊಮ್ಮೆ ಆಶೀರ್ವಾದ ಮಾಡಿದರೆ ದುಪ್ಪಟ್ಟು ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ರಾಹುಲ್ ಗಾಂಧಿಯವರು ಎ. 27ರಂದು ಬೆಳಗ್ಗೆ ಎಲಿಕಾಫ್ಟರ್ ಮೂಲಕ ಮೊಡಂಕಾಪು ಶಾಲಾ ಮೈದಾನಕ್ಕೆ ಆಗಮಿಸಿ, ನಂತರ ಬಿ.ಸಿ.ರೋಡ್ ಸರ್ಕಲ್ ಸಮೀಪ ಗೋಲ್ಡನ್ ಮೈದಾನದಲ್ಲಿ ನಡೆಯುವ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕಾಂಗ್ರೆಸ್ ಮುಖಂಡ ಕೆ.ಸಿ ವೇಣುಗೋಪಾಲ್ ಸಹಿತ ಇನ್ನಿತರ ರಾಜ್ಯ ಹಾಗೂ ಜಿಲ್ಲಾ ನಾಯಕರು ಭಾಗವಹಿಸುವರು ಎಂದು ತಿಳಿಸಿದರು.

ರಾಜ್ಯದಲ್ಲಿಯೇ ಬ್ರಹ್ಮಶ್ರೀ ನಾರಾಯಣ ಗುರು ಅವರ ಜಯಂತಿ ಆಚರಿಸುವ ಹೆಮ್ಮೆ ಬಂಟ್ವಾಳದ್ದು ಎಂದ ಅವರು, ಧಾರ್ಮಿಕ ಕ್ಷೇತ್ರಗಳಿಗೆ ಗರಿಷ್ಠ ಅನುದಾನವನ್ನು ನೀಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ತನ್ನ ಧರ್ಮವನ್ನು ಪ್ರೀತಿಸುವ ಮೂಲಕ ಇತರ ಧರ್ಮವನ್ನು ಗೌರವಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್ -ಎಸ್‌ಡಿಪಿಐ ಮೈತ್ರಿಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ. ಮೈತ್ರಿ ಹಾಗು ಬೆಂಬಲದ ಬಗ್ಗೆ ಪಕ್ಷದ ವರಿಷ್ಠರು ಯಾವುದೇ ಸೂಚನೆ ನೀಡಿಲ್ಲ. ಜಾತ್ಯತೀತ ಪಕ್ಷಕ್ಕೆ ಬೆಂಬಲ ನೀಡುವುದು ಅವರವರ ಅಭಿಪ್ರಾಯಕ್ಕೆ ಬಿಟ್ಟ ವಿಷಯ. ಈ ಬಗ್ಗೆ ಹೆಚ್ಚು ಮಾತನಾಡಲು ಇಚ್ಛಿಸುವುದಿಲ್ಲ ಎಂದು ತಿಳಿಸಿದರು.