ಪುತ್ತೂರು ತಾಲೂಕಿನ ಶೇಖಮಲೆಯ ಸರಕಾರಿ ಶಾಲೆಯ ಆವರಣದಿಂದ ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಮರಗಳನ್ನು ಕಡಿದು ಸಾಗಾಟ ; ಆರೋಪಿಗಳನ್ನು ರಕ್ಷಿಸುವ ಪ್ರಯತ್ನದ ಹಿಂದೆ ಅಕ್ರಮ ಮರ ಸಾಗಾಟಗಾರರ ಲಾಭಿ..? – ಕಹಳೆ ನ್ಯೂಸ್

ಪುತ್ತೂರು: ಸರಕಾರಿ ಶಾಲೆಯ ಆವರಣದಿಂದ ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಮರಗಳನ್ನು ಕಡಿದು ಸಾಗಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಶೇಖಮಲೆಯ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ವರದಿಯಾಗಿದ್ದು,
ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ, ಶಾಲೆಯ ಆವರಣದಲ್ಲಿರುವ ಗಾಳಿ ಮರಗಳನ್ನು ತೆರವುಗೊಳಿಸುವಂತೆ ಮೌಖಿಕವಾಗಿ ಸೂಚನೆ ನೀಡಿದ್ದರು.
ಈ ಹಿನ್ನಲೆಯಲ್ಲಿ ಮರ ಕಡಿಯುವ ಸ್ಥಳೀಯ ವ್ಯಕ್ತಿಗಳು ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿಯನ್ನು ಪಡೆಯದೆ ಅಧ್ಯಕ್ಷರು ಸೂಚಿಸಿದ ಮರಕ್ಕಿಂತ ನಾಲ್ಕು ಪಟ್ಟು ಮರಗಳನ್ನು ಕಡಿದು ಅಕ್ರಮವಾಗಿ ಸಾಗಿಸಿದ್ದಾರೆ.
ಲಕ್ಷಾಂತರ ಮೌಲ್ಯದ ಗಾಳಿ ಮರ, ದೂಪದ ಮರಗಳನ್ನು ಕಡಿದು ಸಾಗಿಸಲಾಗಿದ್ದು, ಅರಣ್ಯ ಇಲಾಖೆ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದೆ.
ಆದರೆ ಮರ ಕಡಿದವನನ್ನು ಮೊದಲ ಆರೋಪಿಯಾಗಿ ಗುರುತಿಸುವ ಬದಲು ಮರ ಕಡಿಯುವಂತೆ ಮೌಖಿಕವಾಗಿ ಸೂಚಿಸಿದ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರನ್ನು ಮೊದಲ ಆರೋಪಿಯೆಂದು ಗುರುತಿಸಿದ್ದಾರೆ.
ಪುತ್ತೂರು ವಲಯ ಅರಣ್ಯಾಧಿಕಾರಿಗಳ ಈ ನಿಲುವು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ಪ್ರಮುಖ ಆರೋಪಿಗಳನ್ನು ಉದ್ದೇಶಪೂರ್ವಕವಾಗಿ ರಕ್ಷಿಸುವ ಪ್ರಯತ್ನದ ಹಿಂದೆ ಅಕ್ರಮ ಮರ ಸಾಗಾಟಗಾರರ ಲಾಭಿಯೂ ಅಡಗಿದೆ ಎನ್ನುವ ಆರೋಪವೂ ಕೇಳಿ ಬರಲಾರಂಭಿಸಿದೆ.









