ATM ನಲ್ಲಿ ನಡೆದ ಅಚ್ಚರಿಗೆ ಬೆರಗಾದ ಗ್ರಾಹಕರು: ಡ್ರಾ ಮಾಡಿದ್ದಕ್ಕಿಂತ 5 ಪಟ್ಟು ಜಾಸ್ತಿ ಹಣ ಕೊಟ್ಟ ಎಟಿಎಂ-ಕಹಳೆ ನ್ಯೂಸ್
ಮಡಿಕೇರಿಯ ಕೊಹಿನೂರು ರಸ್ತೆಯಲ್ಲಿರುವ ಎಟಿಎಂನಲ್ಲಿ ಗ್ರಾಹಕರು ಡ್ರಾ ಮಾಡಿದ್ದಕ್ಕೆ 5 ಪಟ್ಟು ಹೆಚ್ಚು ಹಣ ಬಂದಿದ್ದು ಕೆಲವರು ಹಣ ತೆಗೆದುಕೊಂಡು ಸುಮ್ಮನಾಗಿದ್ದಾರೆ.

ಎಟಿಎಂಗೆ ಹಣ ತುಂಬುವ ಸಿಬ್ಬಂದಿ ಮಾಡಿದ ಎಡವಟ್ಟಿನಿಂದ ಎಟಿಎಂನಲ್ಲಿ ಡ್ರಾ ಮಾಡಿದ್ದಕ್ಕಿಂತ ಐದು ಪಟ್ಟು ಹೆಚ್ಚು ಹಣ ಬಂದಿದೆ ಎನ್ನಲಾಗಿದೆ. ಮಡಿಕೇರಿಗೆ ಕೊಹಿನೂರು ರಸ್ತೆಯಲ್ಲಿರುವ ಎಟಿಎಂ ಕೇಂದ್ರಕ್ಕೆ ಖಾಸಗಿ ಏಜೆನ್ಸಿ ಸಿಬ್ಬಂದಿ ಡಿಸೆಂಬರ್ 30ರಂದು ಹಣ ತುಂಬಿದ್ದಾರೆ. 100 ರೂಪಾಯಿ ಮುಖಬೆಲೆ ನೋಟುಗಳನ್ನು ಹಾಕುವ ಟ್ರೇನಲ್ಲಿ 500 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಾಕಲಾಗಿದೆ.
ಇದರಿಂದಾಗಿ ಗ್ರಾಹಕರು 500 ರೂಪಾಯಿ ಡ್ರಾ ಮಾಡಿದ ಸಂದರ್ಭದಲ್ಲಿ 2500 ರೂ. ಬಂದಿದೆ. ಕೆಲವರು ಇದನ್ನೇ ದುರ್ಬಳಕೆ ಮಾಡಿಕೊಂಡು ಹಣ ಪಡೆದುಕೊಂಡಿದ್ದಾರೆ. ಮೂರು ದಿನಗಳ ಹಿಂದೆ ಎಟಿಎಂ ಕೇಂದ್ರಕ್ಕೆ ಹೋದ ವ್ಯಕ್ತಿಯೊಬ್ಬರು ಹೆಚ್ಚುವರಿ ಹಣ ಬಂದ ಬಗ್ಗೆ ಬ್ಯಾಂಕ್ ಗೆ ಮಾಹಿತಿ ನೀಡಿದ್ದಾರೆ. ನಂತರದಲ್ಲಿ ಬ್ಯಾಂಕ್ ಸಿಬ್ಬಂದಿ ಎಟಿಎಂ ಬಂದ್ ಮಾಡಿದ್ದಾರೆ. ಈ ವೇಳೆಗಾಗಲೇ 1.50 ಲಕ್ಷ ರೂಪಾಯಿ ಹೆಚ್ಚುವರಿಯಾಗಿ ಗ್ರಾಹಕರ ಜೇಬು ಸೇರಿದೆ.
ಎಟಿಎಂ ಕೇಂದ್ರದಲ್ಲಿ ಹಣ ಡ್ರಾ ಮಾಡಿಕೊಂಡ ಗ್ರಾಹಕರ ಬ್ಯಾಂಕ್ ಖಾತೆ ಎಟಿಎಂ ಕಾರ್ಡ್ ಪರಿಶೀಲಿಸಿ ಹೆಚ್ಚುವರಿ ಹಣ ಪಡೆದ ಗ್ರಾಹಕರನ್ನು ಸಂಪರ್ಕಿಸಿ ಹಣ ವಾಪಸ್ ಪಡೆಯಲಾಗಿದೆ. ಕೆಲವರು ಹಣ ಕೊಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಜನವರಿ 6 ರಂದು ಮಡಿಕೇರಿ ನಗರ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ಹೆಚ್ಚುವರಿ ಹಣ ಪಡೆದ ಗ್ರಾಹಕರಿಗೆ ಕರೆಮಾಡಿ ಹೆಚ್ಚುವರಿ ಹಣ ಮರಳಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.









