ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರ ಹಿನ್ನಲೆ : ಸಿಎಂ ಬಿಎಸ್ ವೈ ವಿವಿಧ ಕಾರ್ಯಕ್ರಮಗಳು ರದ್ದು, ದಿಢೀರ್ ಉಡುಪಿಯತ್ತ ಪಯಣ-ಕಹಳೆ ನ್ಯೂಸ್

ಬೆಂಗಳೂರು : ಉಡುಪಿಯ ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಗಂಭಿರಗೊಂಡ ಹಿನ್ನಲೆಯಲ್ಲಿ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ವಿವಿಧ ಕಾರ್ಯಕ್ರಮಗಳನ್ನು ರದ್ದುಗೊಳಿಸಿ, ಉಡುಪಿಯತ್ತ ಶ್ರೀಗಳ ಆರೋಗ್ಯ ವಿಚಾರಿಸುವ ಸಂಬಂಧ ಉಡುಪಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಪೇಜಾವರ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಂತಹ ಶ್ರೀಗಳ ಆರೋಗ್ಯ ಇಂದು ಗಂಭೀರಗೊಂಡ ಹಿನ್ನಲೆಯಲ್ಲಿ, ಶ್ರೀಗಳ ಭೇಟಿಗಾಗಿ ಆಗಮಿಸಿದ್ದ ವಿವಿಧ ಗಣ್ಯರಿಗೆ ಭೇಟಿಗೆ ಅವಕಾಶ ನೀಡದೇ ವಾಪಾಸ್ ಕಳಿಸಲಾಗಿತ್ತು.
ಇದೀಗ ಶ್ರೀಗಳ ಆರೋಗ್ಯ ಮತ್ತಷ್ಟು ಗಂಭೀರಗೊಂಡಿರುವುದಾಗಿ ಆಸ್ಪತ್ರೆಗಳ ಮೂಲದಿಂದ ತಿಳಿದು ಬಂದಿರುವುದರಿಂದ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಇಂದಿನ ವಿವಿಧ ಕಾರ್ಯಕ್ರಮಗಳನ್ನು ದಿಢೀರ್ ರದ್ದುಗೊಳಸಲಾಗಿದೆ. ಅಲ್ಲದೇ ಉಡುಪಿಯತ್ತ ಪಯಣ ಬೆಳೆಸಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಶ್ರೀಗಳ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.









