
ಪುತ್ತೂರು: ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮದ ಪಳನೀರು ಎಂಬಲ್ಲಿನಡೆದಿದ್ದ ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಯೆನ್ನಲಾಗಿದ್ದ ಪುತ್ತೂರು ನಿವಾಸಿಯಾದ ಅಜಿತ್ ಪೂಜಾರಿಯವರಿಗೆ ಪುತ್ತೂರಿನ ಮಾನ್ಯ ಹೆಚ್ಚುವರಿ ಜಿಲ್ಲಾಮತ್ತು ಸತ್ರ ನ್ಯಾಯಾಲಯವು ಶರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಜುಲೈ ಮೊದಲನೇ ವಾರದಲ್ಲಿ ಪಿರ್ಯಾದುದಾರರಾದ ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮದ ನಿವಾಸಿ ಕಮಲ ಎಂಬವರ ಮಗಳು ಹತ್ತನೇ ತರಗತಿಯಲ್ಲಿ ಕಲಿಯುತ್ತಿದ್ದು, ದಿನಾಂಕ 05/07/2019ರಂದು ಬೆಳಿಗ್ಗೆ ಎಂದಿನಂತೆ ಶಾಲೆಗೆ ಹೋಗುತ್ತಿದ್ದಾಗ ,ಮಾಡ್ನೂರು ಗ್ರಾಮದ ಪಳನೀರು ಎಂಬಲ್ಲಿರುವ ನಾರಾಯನ ಭಟ್ ರವರ ಜಾಗದ ಬಳಿ ತಲುಪಿದಾಗ , ಅಜಿತ್ ಪೂಜಾರಿ ಕಾಣಸಿಕ್ಕಿ ಆಕೆಯ ತಾಯಿ ಸೊಪ್ಪುತರಲು ಹೋಗಿ ತಲೆ ತಿರುಗಿ ಬಿದ್ದಿದ್ದಾರೆ ಎಬ್ಬಿಸಲು ಬರುವಂತೆ ಆಕೆಗೆ ತಿಳಿಸಿದಾಗ,ಆಕೆಯು ಒಪ್ಪದ ಕಾರಣ ಆಕೆಯ ಕೈ ಹಿಡಿದಾಗ, ಆಕೆ ಪ್ರಜೆ ತಪ್ಪಿ ಬಿದ್ದಿರುವುದಾಗಿದೆ. ತದನಂತರ, ಆಕೆಗೆ ಎಚ್ಚರವಾದಾಗ ಆಕೆಯ ಸಮವಸ್ತ್ರ ಅಸ್ತವ್ಯಸ್ತಗೊಂಡಿದ್ದು, ಬಟ್ಟೆಯಲ್ಲಿ ರಕ್ತದ ಕಲೆಯಿದ್ದು, ನಂತರ ಆಕೆ ಮನೆಗೆ ಬಂದು ಸದ್ರಿ ವಿಚಾರ ತಿಳಿಸಿ,ಸಂಶಯಗೊಂಡು ಅಜಿತ್ ಪೂಜಾರಿಯವರು ಅತ್ಯಾಚಾರ ಮಾಡಿರುವುದಾಗಿ ಆರೋಪಿಸಿ, ಪುತ್ತೂರು ಗ್ರಾಮಾಂತರ ಠಾಣೆಗೆ ದೂರನ್ನು ನೀಡಿರುತ್ತಾರೆ.
ಸದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಪುತ್ತೂರು ನಿವಾಸಿಯಾದ ಅಜಿತ್ ಪೂಜಾರಿಯವರನ್ನು ಬಂಧಿಸಿದ್ದರು.ಈ ನಡುವೆ ಅಜಿತ್ ಪೂಜಾರಿಯವರು ಅವರ ಪರ ವಕೀಲರಾದ ಮಹೇಶ್ ಕಜೆ ಮುಖಾಂತರ ಜಾಮೀನು ಕೋರಿ ಪುತ್ತೂರಿನ ಮಾನ್ಯ ಹೆಚ್ಚುವರಿ ಜಿಲ್ಲಾಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.ಆದರೆ, ಮಾನ್ಯ ನ್ಯಾಯಾಲಯವು ಸದ್ರಿ ಅರ್ಜಿಯನ್ನು ತಿರಸ್ಕರಿಸಿತ್ತು.
ಸದ್ರಿ ಪ್ರಕರಣದ ತನಿಖೆ ನಡೆಸಿದ ಪೋಲೀಸರು ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.ತದನಂತರ,ಎರಡನೇ ಬಾರಿ ಜಾಮೀನು ಕೋರಿ ಸದ್ರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು .ಈ ಕುರಿತು ಕೂಲಂಕುಶ ತನಿಖೆ ನಡೆಸಿದ ಮಾನ್ಯ ನ್ಯಾಯಾಲಯವು, ಆರೋಪಿಯು ಸದ್ರಿ ಕೃತ್ಯ ನಡೆಸಿದ್ದಾರೆ ಎಂಬುವುದಕ್ಕೆ ಯಾವುದೇ ವೈಜಾನಿಕ ಪುರಾವೆಗಳು ಮತ್ತು ದಾಖಲೆಗಳು ಲಭ್ಯವಿರುವುದಿಲ್ಲ, ಇತ್ಯಾದಿ ಅಂಶಗಳನ್ನು ಪರಿಗಣಿಸಿ, ಆರೋಪಿ ಅಜಿತ್ ಪೂಜಾರಿಯವರಿಗೆ ಪುತ್ತೂರಿನ ಮಾನ್ಯ ಹೆಚ್ಚುವರಿ ಜಿಲ್ಲಾಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರುಡಾಲ್ಫ್ ಪಿರೇರಾ ರವರು ಶರತ್ತು ಬದ್ಧ ಜಾಮೀನನ್ನು ಮಂಜೂರು ಮಾಡಿದ್ದಾರೆ.
ಆರೋಪಿಯ ಪರವಾಗಿ ವಕೀಲರಾದ ಕಜೆ ಲಾ ಛೇಂಬರ್ಸ್ ಮಹೇಶ್ ಕಜೆಯವರು ವಾದಿಸಿದ್ದರು.









