
ಪುತ್ತೂರು: ವಸತಿನಿಲಯಗಳು ವಿದ್ಯಾರ್ಥಿಗಳ ಬದುಕಿಗೆ ಅಗತ್ಯವಿರುವ ಅತ್ಯಮೂಲ್ಯ ಜೀವನಾನುಭವವನ್ನು ನೀಡಬಲ್ಲ ಕೇಂದ್ರಗಳಾಗಿವೆ. ವಸತಿನಿವಾಸಿಗಳು ಸಹನಿವಾಸಿಗಳನ್ನು ಅರ್ಥೈಸಿಕೊಂಡು ಜೀವಿಸಲು ಪ್ರಯತ್ನಿಸಬೇಕು ಎಂದು ಬನ್ನೂರು ಸಂತ ಆ್ಯಂಟನಿ ಕ್ರೈಸ್ತ ದೇವಾಲಯದ ಧರ್ಮಗುರುಗಳಾದ ವಂ. ಪ್ರಶಾಂತ್ ಫೆರ್ನಾಂಡಿಸ್ ಹೇಳಿದರು.
ಸಂತ ಫಿಲೋಮಿನಾ ಕಾಲೇಜಿನ ಪುರುಷರ ವಸತಿ ನಿಲಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಹೊಸತಾಗಿ ದಾಖಲಾತಿ ಹೊಂದಿದ ವಿದ್ಯಾರ್ಥಿಗಳನ್ನು ಸ್ವಾಗತಿಸುವ ‘ಫ್ರೆಶರ್ಸ್ ಡೇ’ ಮತ್ತು ವಸತಿನಿಲಯದ ವಜ್ರಮಹೋತ್ಸವ ಆಚರಣೆ ಕಾರ್ಯಕ್ರಮವನ್ನು ಜುಲೈ 20ರಂದು ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಉದ್ಘಾಟಿಸಿ, ಮಾತನಾಡಿದರು.
ವಸತಿನಿಲಯಗಳು ಇತರರೊಂದಿಗೆ ಹೊಂದಾಣಿಕೆಯಿಂದ ಜೀವಿಸಲು ಅಗತ್ಯವಿರುವ ಗುಣವನ್ನು ಕಲಿಸುತ್ತವೆ. ಉತ್ತಮ ಶಿಕ್ಷಣವನ್ನು ಪಡೆಯುವುದರೊಂದಿಗೆ ಉತ್ತಮ ಸಮಾಜಜೀವಿಯಾಗಿ ರೂಪುಗೊಳ್ಳುವುದೂ ಅತಿ ಅಗತ್ಯ. ಸಮಯದ ಸದುಪಯೋಗಪಡಿಸಿಕೊಂಡು ಭವಿಷ್ಯವನ್ನು ಸುಭದ್ರಗೊಳಿಸಿಕೊಳ್ಳಿ ಎಂದರು.
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ರೆ. ಫಾ. ವಿಜಯ್ ಲೋಬೊ ಮಾತನಾಡಿ, ಆರು ದಶಕಗಳನ್ನು ಪೂರ್ತಿಗೊಳಿಸಿರುವ ಈ ಹಾಸ್ಟೆಲ್ ಹಲವಾರು ಅಗ್ರಗಣ್ಯರನ್ನು ಸೃಷ್ಟಿ ಮಾಡಿರುವುದು ಹೆಮ್ಮೆಯ ಸಂಗತಿ. ಕನಿಷ್ಟ ಎರಡು ವರ್ಷಗಳ ಹಾಸ್ಟೆಲ್ ಜೀವನಾನುಭವವು ಪ್ರತಿಯೊಬ್ಬ ವಿದ್ಯಾರ್ಥಿಯ ಪಾಲಿಗೂ ಬರಬೇಕು. ಅದು ಹೊಂದಾಣಿಕೆ, ಶಿಸ್ತು, ಸಮಯಪ್ರಜ್ಞೆ, ಸ್ವಾವಲಂಬನೆ, ನಾಯಕತ್ವ ಗುಣ, ಸವಾಲುಗಳನ್ನು ಎದುರಿಸುವುದು ಮೊದಲಾದ ಅಂಶಗಳನ್ನು ಕಲಿಸಿಕೊಡುತ್ತದೆ. ಧನಾತ್ಮಕ ಅಂಶಗಳನ್ನು ಆಯ್ಕೆ ಮಾಡಿಕೊಂಡಾಗ ಧನಾತ್ಮಕತೆಯೆಡೆಗೆ ಮುಂದುವರಿಯಲು ಸಾಧ್ಯವಾಗುತ್ತದೆ. ಋಣಾತ್ಮಕ ಅಂಶಗಳನ್ನು ತ್ಯಜಿಸುವ ಮನೋಗುಣ ಬೆಳೆಸಿಕೊಳ್ಳಿ ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ಜೀವನದಲ್ಲಿ ಅನುಭವಕ್ಕಿಂತ ಮಿಗಿಲಾದ ಪಾಠ ಬೇರಾವುದೂ ಇಲ್ಲ. ಹಾಸ್ಟೆಲ್‍ನಲ್ಲಿ ಹಿರಿಯ ವಿದ್ಯಾರ್ಥಿಗಳು ಮತ್ತು ಕಿರಿಯ ವಿದ್ಯಾರ್ಥಿಗಳ ನಡುವೆ ಹೊಂದಾಣಿಕೆ ಅತಿ ಅಗತ್ಯ. ಹಾಸ್ಟೆಲ್‍ನಲ್ಲಿ ಆರ್ಥಿಕವಾಗಿ ಮುಂದುವರಿದವರು, ಹಿಂದುಳಿದವರು, ವಿವಿಧ ಜಾತಿ, ಮತ, ಧರ್ಮ, ಪ್ರದೇಶಗಳಿಗೆ ಸೇರಿದವರು ಒಂದೆಡೆ ಸೇರಿ ಜೀವಿಸುವುದರಿಂದ ಸಾಮರಸ್ಯದ ಜೀವನವನ್ನು ಅರಿತುಕೊಳ್ಳಬಹುದು. ವಿದ್ಯಾರ್ಥಿ ಬದುಕಿನಲ್ಲಿ ನಿಖರವಾದ ಗುರಿಯನ್ನು ಹೊಂದಿರಬೇಕು. ವಿಶಿಷ್ಟ ಸಂಗತಿಗಳು ಜರಗಬೇಕೆಂದಾದರೆ ಅವಿರತ ಶ್ರಮದ ಅಗತ್ಯವಿದೆ ಎಂದರು.
ಇದೇ ಸಂದರ್ಭದಲ್ಲಿ ಹಾಸ್ಟೆಲ್ ವಜ್ರಮಹೋತ್ಸವಾಚರಣೆಯ ಲಾಂಛನವನ್ನು ಬಿಡುಗಡೆ ಮಾಡಲಾಯಿತು. ವಜ್ರಮಹೋತ್ಸವ ಆಚರಣೆಯ ದ್ಯೋತಕವಾಗಿ ಕ್ಯಾಂಪಸ್ ಸ್ವಚ್ಛತೆ, ಅರಣ್ಯ ನಿರ್ಮಾಣ, ಕಳೆದ 60 ವರ್ಷಗಳಲ್ಲಿ ಹಾಸ್ಟೆಲ್ ವಾಸಿ-ಹಿರಿಯ ವಿದ್ಯಾರ್ಥಿಗಳ ಸಮಾವೇಶ ಮೊದಲಾದ ಯೋಜನೆಗಳನ್ನು ಪ್ರಕಟಗೊಳಿಸಲಾಯಿತು. ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಗೊಂಡ ಹಾಸ್ಟೆಲ್ ನಿವಾಸಿ ನಿತಿನ್ ಎಚ್ ಆರ್ ಇವರನ್ನು ಅಭಿನಂದಿಸಲಾಯಿತು.
ಶೆರ್ಮನ್ ರೋಡ್ರಿಗಸ್ ಮತ್ತು ತಂಡದವರು ಪ್ರಾರ್ಥಿಸಿದರು. ವಸತಿ ನಿಲಯದ ವಾರ್ಡನ್ ವಂ. ರಿತೇಶ್ ರೋಡ್ರಿಗಸ್ ಸ್ವಾಗತಿಸಿದರು. ವಿದ್ಯಾರ್ಥಿನಿಲಯದ ಅಧ್ಯಕ್ಷ ಶಶಾಂಕ ವಂದಿಸಿದರು. ಅಲೆಕ್ಸ್ ಕಾರ್ಯಕ್ರಮ ನಿರೂಪಿಸಿದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಮನರಂಜನಾ ಕಾರ್ಯಕ್ರಮ ಜರಗಿತು.














