Tuesday, April 28, 2026
ಸುದ್ದಿ

ಹೊಸ ಆಸೆಯ ಚಿಗುರಿನೊಂದಿಗೆ ಮತ್ತೆ ಜಮೀನಿನತ್ತ ಹೆಜ್ಜೆ ಹಾಕಿದ ರೈತರು-ಕಹಳೆ ನ್ಯೂಸ್

ಹಾವೇರಿ: ಕಳೆದ ವರ್ಷ ಮುಂಗಾರು, ಹಿಂಗಾರು ಎರಡೂ ಮಳೆ ಕೈಕೊಟ್ಟು ಬರಗಾಲದ ಬವಣೆ, ಸಂಕಷ್ಟಕ್ಕೊಳಗಾಗಿದ್ದ ಜಿಲ್ಲೆಯ ರೈತರು ಈಗ ಹೊಸ ಆಸೆಯ ಚಿಗುರಿನೊಂದಿಗೆ ಮತ್ತೆ ಜಮೀನಿನತ್ತ ಹೆಜ್ಜೆ ಹಾಕುತ್ತಿದ್ದಾರೆ.

ಮಳೆಯಿಲ್ಲದೇ ನದಿ, ಕೆರೆ ಹಳ್ಳಗಳೆಲ್ಲ ಒಣಗಿದ್ದವು. ನಿನ್ನೆಯಷ್ಟೇ ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ರೈತರ ಮೊಗದಲ್ಲಿ ಹೊಸ ಆಸೆ ಚಿಗುರೊಡೆಯುವಂತೆ ಮಾಡಿದೆ. ಹೀಗಾಗಿ ರೈತರು ಕೃಷಿ ಕಾರ್ಯಗಳಿಗೆ ಅವಶ್ಯವಿರುವ ಸಾಮಗ್ರಿಗಳ ಸಂಗ್ರಹಣೆ ಸಿದ್ಧತೆ ನಡೆಸಿದ್ದಾರೆ. ಕೃಷಿಗೆ ಬೇಕಾಗುವ ಪ್ರಮುಖ ಸಲಕರಣೆಗಳಾದ ರಂಟಿ, ಕುಂಟಿ, ಕೊರಡು ಬುಡಗುಂಟಿ, ನೊಗ, ಕಾಯಿಕೊಲು ದುರಸ್ತಿ ಮಾಡಿಸಿಕೊಳ್ಳುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ವರ್ಷ ಸಮರ್ಪಕ ಮಳೆ ಇಲ್ಲದೇ ಮನೆಯ ಮೂಲೆ ಸೇರಿದ್ದ ಕೃಷಿ ಉಪಕರಣಗಳನ್ನು ಕಮ್ಮಾರನ ಕುಲುಮೆಗೆ ಒಯ್ದು ಸರಿ ಮಾಡಿಕೊಳ್ಳುತ್ತಿದ್ದಾರೆ. ಬಿತ್ತನೆಗಾಗಿ ರೈತರು ಎತ್ತುಗಳನ್ನು ಬಳಸುವರು ತಮಗೆ ಬೇಕಾದ ನೊಗ, ಕುಂಟಿ, ಬಾರಕೋಲು, ಕೊರಡುಗಳನ್ನು ಸಜ್ಜುಗೊಳಿಸುತ್ತಿದ್ದಾರೆ. ಇನ್ನು ಟ್ರ್ಯಾಕ್ಟರ್ ಮೂಲಕ ಬಿತ್ತನೆ ಮಾಡುವವರು ಯಂತ್ರದ ನೇಗಿಲು, ರಂಟಿ ತಯಾರಿಸಿಕೊಳ್ಳುತ್ತಿದ್ದಾರೆ.

ಮರದ ಕೆಲಸ ಮಾಡುವವರು, ಕಮ್ಮಾರರು ಹೊಸ ಸಲಕರಣೆ ತಯಾರಿಕೆ ಹಾಗೂ ಹಳೆಯ ಸಲಕರಣೆ ಸಾಣೆಗೊಳಿಸುವಲ್ಲಿ ನಿರತರಾಗಿದ್ದಾರೆ. ಮಳೆ ಬಿದ್ದಾಗಲೊಮ್ಮೆ ಗರಿಕೆ ಚಿಗುರುವಂತೆ ಕಳೆದ ವರ್ಷ ಕಣ್ಣೀರಲ್ಲಿ ಕೈತೋಳೆದಿದ್ದ ರೈತರು ಈಗ ಮತ್ತೆ ಸಾವರಿಸಿಕೊಂಡು ಹೊಸ ನಿರೀಕ್ಷೆಯೊಂದಿಗೆ ಬಿತ್ತನೆಗೆ ಸಿದ್ಧತೆಯನ್ನು ನಡೆಸಿದ್ದಾರೆ.