ಜಿಂದಾಲ್ ಗೆ ಭೂಮಿ ಪರಭಾರೆ ವಿಚಾರದಲ್ಲಿ ಕಮಿಷನ್ ಪಡೆದ ಡಿಕೆ ಶಿವಕುಮಾರ್ ಹಾಗೂ ಜಾರ್ಜ್: ಶೋಭಾ ಕರಂದ್ಲಾಜೆ ಆರೋಪ – ಕಹಳೆ ನ್ಯೂಸ್

ಬೆಂಗಳೂರು: ಜಿಂದಾಲ್ ಗೆ ಭೂಮಿ ಪರಭಾರೆ ವಿಚಾರದಲ್ಲಿ ಡಿಕೆ ಶಿವಕುಮಾರ್ ಹಾಗೂ ಜಾರ್ಜ್ ಕಮಿಷನ್ ಪಡೆದಿರುವುದಾಗಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದು, ಜಿಂದಾಲ್ ಗೆ ಭೂಮಿ ಮಾರಾಟಕ್ಕೆ ಬಿಜೆಪಿ ಅವಕಾಶ ಕೊಡುವುದಿಲ್ಲ ಎಂದರು.
ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಿಂದಾಲ್ ಗೆ ಭೂಮಿ ಮಾರಾಟ ವಿಚಾರದಲ್ಲಿ ಈಗೇಕೆ ಸಿದ್ದರಾಮಯ್ಯ, ಎಚ್ ಡಿ ಕುಮಾರಸ್ವಾಮಿ, ದೇವೇಗೌಡರು, ವಿಶ್ವನಾಥ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.
ಆವತ್ತು ಸಿದ್ದರಾಮಯ್ಯ ಬಳ್ಳಾರಿ ಪಾದಯಾತ್ರೆ ಮಾಡಿದ್ದರು, ತೊಡೆ ತಟ್ಟಿದ್ದರು..ಈಗ ಅವೆಲ್ಲ ಎಲ್ಲಿ ಹೋಯ್ತು? ಯಾವ ಆಧಾರದಲ್ಲಿ ಶುದ್ಧ ಕ್ರಯ ಮಾಡಿ ಭೂಮಿಯನ್ನು ಕೊಟ್ಟಿದ್ದೀರಾ? 3,666 ಎಕರೆ ಜಮೀನು ಕಡಿಮೆ ದರದಲ್ಲಿ ಹೇಗೆ ಪರಭಾರೆ ಮಾಡಿದ್ದೀರಿ ಎಂದು ಶೋಭಾ ಪ್ರಶ್ನಿಸಿದರು.
ರಾಜ್ಯ ಸರ್ಕಾರ ರೈತರ ಸಾಲಮನ್ನಾದ ವರದಿಯನ್ನು ಬಹಿರಂಗಪಡಿಸಲಿ. ಜಾತಿ, ಧರ್ಮ, ಹಣದ ಆದಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ದೂರಿದ ಅವರು, ರಾಜ್ಯ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದರು.








