
ಪಾಕಿಸ್ತಾನ ಬಾಲಾಕೋಟ್ ನಲ್ಲಿನ ಉಗ್ರ ಕ್ಯಾಂಪ್ ಗಳನ್ನು ಧ್ವಂಸ ಮಾಡಿದ್ದಷ್ಟೇ ಅಲ್ಲದೇ ಹತ್ತಾರು ಉಗ್ರರ ಬಲಿ ಪಡೆದಿದ್ದ ಇಸ್ರೇಲ್ ನಿರ್ಮಿತ ‘ಸ್ಪೈಸ್ 2000’ ಬಾಂಬ್‍ಗಳನ್ನು ಖರೀದಿ ಮಾಡಲು ಭಾರತೀಯ ವಾಯು ಸೇನೆ ಅನುಮೋದನೆ ನೀಡಿದೆ ಎಂದು ತಿಳಿದುಬಂದಿದೆ.

ಬಾಲಾಕೋಟ್ ಉಗ್ರ ಕ್ಯಾಂಪ್ ಧ್ವಂಸ ಮಾಡಿದ್ದ ಇಸ್ರೇಲ್ ನಿರ್ಮಿತ ವಿಧ್ವಂಸಕ ಬಂಕರ್ ಬಸ್ಟರ್ ‘ಸ್ಪೈಸ್ 2000’ ಬಾಂಬ್‍ನ ಹೊಸ ಅವತರಣಿಕೆಯ ಬಾಂಬ್‍ಗಳನ್ನು ಖರೀದಿ ಮಾಡಲು ಭಾರತೀಯ ವಾಯುಸೇನೆ ಮುಂದಾಗಿದ್ದು, ಈ ಸಂಬಂಧ ನಡೆದ ಚರ್ಚೆಯಲ್ಲಿ ಸುಮಾರು 100 ‘ಸ್ಪೈಸ್ 2000’ಗಳನ್ನು ಖರೀದಿ ಮಾಡಲು ಸೇನೆ ಅನುಮೋದನೆ ನೀಡಿದೆ ಎನ್ನಲಾಗಿದೆ. ಕೇಂದ್ರ ಸರ್ಕಾರ ಸೇನೆಯ ಮೂರು ದಳಗಳಿಗೂ ತುರ್ತು ಪರಿಸ್ಥಿತಿ ನಿರ್ವಹಣೆಗಾಗಿ ತಲಾ 300 ಕೋಟಿ ರೂ ಗಳನ್ನು ಮೀಸಲಿರಿಸಿದೆ.
ವಾಯುಸೇನೆ ‘ಸ್ಪೈಸ್ 2000’ ಮಾರ್ಕ್ 84 ಸರಣಿಯ ಸುಮಾರು 100 ಬಾಂಬ್ ಗಳನ್ನು ಖರೀದಿ ಮಾಡಲು ಒಪ್ಪಂದ ಮಾಡಿಕೊಂಡಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಈಗಾಗಲೇ ಭಾರತೀಯ ವಾಯುಸೇನೆ ಬಳಿ ಎಂಕೆ-84, ಬಿಎಲ್ ಯು 109, ಎಪಿಡಬಲ್ಯೂ ಮತ್ತು ಆರ್ ಎಪಿ 2000 ಸರಣಿ ಬಾಂಬ್ ಗಳಿದ್ದು, ಈ ಪಟ್ಟಿಗೆ ಇದೀಗ ‘ಸ್ಪೈಸ್ 2000’ ಮಾರ್ಕ್ 84 ಸರಣಿಯ ಬಾಂಬ್ ಗಳೂ ಕೂಡ ಸೇರ್ಪಡೆಯಾಗಲಿವೆ.
ಇನ್ನು ಇಸ್ರೇಲ್ ನಿರ್ಮಿತ ಸ್ಪೈಸ್ 2000 ಬಾಂಬ್ ಗಳನ್ನು ಬಂಕರ್ ಬಸ್ಟರ್ ಎಂದೇ ಕರೆಯಲಾಗುತ್ತದೆ. ಶತ್ರುಪಾಳಯದ ಬಂಕರ್ ಗಳು ಎಷ್ಟೇ ಸುರಕ್ಷಿತವಾಗಿದ್ದರೂ ಅವುಗಳನ್ನು ಛಿದ್ರಗೊಳಿಸುವ ಸಾಮರ್ಥ್ಯ ಈ ಬಾಂಬ್‍ಗಳಿಗಿದೆ. ಅಲ್ಲದೆ ಎಷ್ಟೇ ಬಲಿಷ್ಟ ಕಟ್ಟಡಗಳಾದರೂ ಕ್ಷಣಮಾತ್ರದಲ್ಲಿ ಸ್ಫೋಟಿಸಿ ಧರೆಗುರುಳಿಸುತ್ತದೆ. ಅಲ್ಲದೆ ಈ ‘ಸ್ಪೈಸ್ 2000’ ಬಾಂಬ್‍ಗಳು ಲೇಸರ್ ಗೈಡೆಡ್ ಬಾಂಬ್ ಗಳಾಗಿದ್ದು, ಗುರಿಗಳನ್ನು ನಿಗದಿ ಪಡಿಸಿ ಉಡಾವಣೆ ಮಾಡಿದರೆ ಸಾಕು ಎಂತಹುದೇ ಪರಿಸ್ಥಿತಿಯಲ್ಲೂ ಗುರಿಗಳನ್ನು ನಿಖರವಾಗಿ ಬೇದಿಸುವ ಸಾಮರ್ಥ್ಯವನ್ನು ಈ ಬಾಂಬ್‍ಗಳು ಹೊಂದಿವೆ.








