
ಅಪ್ಪಟ್ಟ ಆರ್‌ಸಿಬಿ ಅಭಿಮಾನಿಯಾಗಿದ್ದ ದೀಪಿಕಾ ಘೋಷ್ ಆರ್‌ಸಿಬಿ ಬಾವುಟ ಹಿಡಿದು ಅಭಿಮಾನಿಗಳ ಹೃದಯ ಗೆದ್ದಿದ್ದರು, ಹೌದು ಚಿನ್ನಸ್ವಾಮಿ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂತು ಆರ್‌ಸಿಬಿ ತಂಡವನ್ನು ಬೆಂಬಲಿಸುತ್ತಿದ್ದ ಯುವತಿ, ಮಾಡೆಲ್ ದೀಪಿಕಾ ಘೋಷ್ ಒಂದೇ ದಿನದಲ್ಲಿ ಎಲ್ಲರ ಮನೆ ಮಾತಾಗಿ ಬಿಟ್ಟಿದ್ದರು.
ದೀಪಿಕಾ ಘೋಷ್ ಹಲವು ವರ್ಷಗಳಿಂದ ಕ್ರೀಡಾಂಗಣಕ್ಕೆ ತೆರಳಿ ಆರ್‌ಸಿಬಿ ಪಂದ್ಯಗಳನ್ನು ವೀಕ್ಷಿಸುತ್ತಿದ್ದು, ಆರ್‌ಸಿಬಿ -ಸನ್‌ರೈಸರ್ಸ್ ನಡುವಿನ ಪಂದ್ಯ, ಇವರ ಪಾಲಿಗೆ ಮತ್ತೊಂದು ಪಂದ್ಯವಾಗಿತ್ತು ಅಷ್ಟೆ. ಆದರೆ ಟೀವಿಯಲ್ಲಿ ಬಂದಿದ್ದೇ ಬಂದಿದ್ದು, ಆಕೆಯ ಜೀವನ ಬದಲಾಗಿದೆ.

ಸಾಮಾಜಿಕ ತಾಣಗಳಿಂದ ಪಡೆದ ಜನಪ್ರಿಯತೆಯೇ ಆಕೆಗೀಗ ಮುಳುವಾಗಿದೆ. ಐಪಿಎಲ್‍ನಿಂದ ಸೆಲೆಬ್ರಿಟಿ ಪಟ್ಟಪಡೆದ ಬಳಿಕ ತಾನು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ದೀಪಿಕಾ ವಿವರವಾಗಿ ಬರೆದುಕೊಂಡಿದ್ದಾರೆ. ‘ನನ್ನ ಹೆಸರು ದೀಪಕಾ ಘೋಷ್. ನನ್ನ ಬಗ್ಗೆ ಹೇಳಲಾಗುತ್ತಿರುವ ವಿಚಾರಗಳ ಪೈಕಿ ಬಹುಶಃ ಇದೊಂದೇ 100ರಷ್ಟುಸತ್ಯ. ನನಗೆ ಯಾವ ಜನಪ್ರಿಯತೆಯೂ ಬೇಕಿರಲಿಲ್ಲ. ನಾನು ಸೆಲೆಬ್ರಿಟಿ ಅಲ್ಲ, ಸಾಮಾನ್ಯ ಅಭಿಮಾನಿಯಷ್ಟೆ. ಸಾಮಾಜಿಕ ತಾಣಗಳಲ್ಲಿ ನನ್ನ ಬಗ್ಗೆ ಕೆಟ್ಟದಾಗಿ ಪ್ರಚಾರವಾಗುತ್ತಿದೆ. ಮಾನಸಿಕ ಒತ್ತಡಕ್ಕೆ ಸಿಲುಕಿದ್ದೇನೆ. ಪುರುಷರು ನನಗೆ ಕೀಳು ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಮಹಿಳೆಯರು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ನಾನು ಅವರೊಬ್ಬಳು ಎನ್ನುವುದನ್ನು ಮರೆತಿದ್ದಾರೆ’ ಎಂದು ಬರೆದಿದ್ದಾರೆ.
ಒಟ್ಟಿನಲ್ಲಿ ಪಂದ್ಯ ವೀಕ್ಷಿಸಲು ಸಾಮಾನ್ಯರಂತೆ ಬಂದ ದೀಪಿಕಾ ಘೋಷ್‍ಗೆ ಒಂದು ಕಡೆ ಅಭಿಮಾನಿಗಳು ಹುಟ್ಟಿಕೊಂಡರೆ, ಇನ್ನೊಂದೆಡೆ ಅಪಪ್ರಚಾರಗಳು ದೊರಕುತ್ತಿದ್ದು ತಮ್ಮ ನೋವನ್ನ ಅಭಿಮಾನಿಗಳ ಮುಂದಿಟ್ಟಿದ್ದಾರೆ.









