
ಮಳೆ ಆರಂಭವಾದ ಹಿನ್ನಲೆಯಲ್ಲಿ ಆಗುಂಬೆ ಘಾಟ್‍ನಲ್ಲಿ ಗುಡ್ಡ ಕುಸಿದಿರುವ ಕಡೆಗಳಲ್ಲಿ ಶಾಶ್ವತವಾಗಿ ದುರಸ್ತಿ ಕಾರ್ಯ ಕೈಗೊಂಡಿದೆ, ಈ ಹಿನ್ನೆಲೆಯಲ್ಲಿ ಮಾರ್ಚ್ 1ರಿಂದ 31ರವರೆಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿದೆ.ಸಂಚಾರ ನಿಷೇಧ ಮೇ 1 ರಿಂದ 15 ರವರೆಗೆ ಅಥವಾ ಕಾಮಗಾರಿ ಮುಗಿಯುವ ತನಕ ಜಾರಿಯಲ್ಲಿರುವುದು. ಕಾಮಗಾರಿ ನಡೆಯುವ ವೇಳೆ ನಿಷೇಧಿತ ಮಾರ್ಗದಲ್ಲಿ ಯಾವುದೇ ವಾಹನ ಸಂಚರಿಸದಂತೆ ಮತ್ತು ಕಾಮಗಾರಿಗೆ ಅಡಚಣೆಯಾಗದಂತೆ ಸೂಕ್ತ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲು ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಆದೇಶ ಹೊರಡಿಸಿದ್ದಾರೆ.

ಇನ್ನು ಈ ಅವಧಿಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದೆ. ಲಘು ವಾಹನಗಳಾದ ಸಾಮಾನ್ಯ ಬಸ್ಸು, ಜೀಪು, ವ್ಯಾನ್, ಎಲ್ ಸಿವಿ (ಮಿನಿ ವ್ಯಾನ್), ದ್ವಿಚಕ್ರ ವಾಹನಗಳು ತೀರ್ಥಹಳ್ಳಿ-ಕೊಪ್ಪ-ಶೃಂಗೇರಿ-ಮಾಳಾಘಾಟ್-ಕಾರ್ಕಳ-ಉಡುಪಿ (ರಾಷ್ಟ್ರೀಯ ಹೆದ್ದಾರಿ 169) ಮೂಲಕ ಸಂಚರಿಸಬೇಕು. ಭಾರಿ ವಾಹನಗಳಾದ ರಾಜಹಂಸ, ಐರಾವತ ಮತ್ತು ಖಾಸಗಿ ಲಕ್ಷುರಿ ಬಸ್‍ಗಳು, ಬುಲೆಟ್ ಟ್ಯಾಂಕರ್ಸ್, ಶಿಪ್ ಕಾರ್ಗೋ ಕಂಟೈನರ್ಸ್ ಮತ್ತು ಲಾಂಗ್ ಚಾಸೀಸ್ ವಾಹನಗಳಿಗೆ ತೀರ್ಥಹಳ್ಳಿ-ಮಾಸ್ತಿಕಟ್ಟೆ- ಹೊಸಂಗಡಿ-ಸಿದ್ದಾಪುರ- ಕುಂದಾಪುರ-ಉಡುಪಿ (ರಾಜ್ಯ ಹೆದ್ದಾರಿ 52) ಮೂಲಕ ಸಂಚರಿಸಲು ಬದಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಬದಲಿ ಮಾರ್ಗದೊಂದಿಗೆ ಆಗುಂಬೆಯಲ್ಲಿರುವ ಸರ್ಕಾರಿ ಶಾಲೆ ಮತ್ತು ಎಸ್ ವಿ ಎಸ್ ಶಾಲೆಗಳಿಗೆ ವಿದ್ಯಾರ್ಥಿಗಳು ಓಡಾಡಬೇಕಾದ ಅವಶ್ಯಕತೆ ಇರುವುದರಿಂದ ಮಿನಿ ಬಸ್‍ಗಳನ್ನು ತೀರ್ಥಹಳ್ಳಿ-ಆಗುಂಬೆ- ಬಿದರಗೋಡು-ಶೃಂಗೇರಿ ಮಾರ್ಗವಾಗಿಯೂ ಮತ್ತು ಸಾಮಾನ್ಯ ಬಸ್‍ಗಳನ್ನು ತೀರ್ಥಹಳ್ಳಿ-ಕಲ್ಮನೆ-ಹೆಗ್ಗೋಡು- ರಾಮಕೃಷ್ಣಾಪುರ- ಕಮ್ಮರಡಿ-ಶೃಂಗೇರಿ ಮಾರ್ಗದಲ್ಲಿ ಸಂಚರಿಸಲು ಅನುವು ಮಾಡಲಾಗಿದೆ. ಸಾರ್ವಜನಿಕರು ಸಹಕರಿಸುವಂತೆ ತಿಳಿಸಲಾಗಿದೆ.









