ಆಶಾ ಕಾರ್ಯಕರ್ತೆಯರ ಸೇವೆ ಅವಮಾನಿಸುವ ಸಚಿವರ ಹೇಳಿಕೆಗೆ ಡಾ. ಮಂಜುಳಾ ಅನಿಲ್ ರಾವ್ ತೀವ್ರ ಖಂಡನೆ – ಕಹಳೆ ನ್ಯೂಸ್

ಮಂಗಳೂರು: ಆಶಾ ಕಾರ್ಯಕರ್ತೆಯರ ಸೇವೆ ಇಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತದೆ ಎಂಬ ಆರೋಗ್ಯ ಸಚಿವರಾದ ಯು.ಟಿ. ಖಾದರ್ ಅವರ ಹೇಳಿಕೆ ಅತ್ಯಂತ ಖಂಡನೀಯ ಹಾಗೂ ಮಹಿಳಾ ಶ್ರಮಶಕ್ತಿಗೆ ಮಾಡಿದ ಅವಮಾನವಾಗಿದೆ.
ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಮನೆಮನೆಗೆ ತೆರಳಿ ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ವೃದ್ಧರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಬೆನ್ನೆಲುಬಾಗಿದ್ದಾರೆ. ಸರ್ಕಾರದ ಆರೋಗ್ಯ ಯೋಜನೆಗಳನ್ನು ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿಸುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.
ಕೊರೊನಾ ಸಂಕಷ್ಟದ ಸಂದರ್ಭದಲ್ಲಿಯೂ ತಮ್ಮ ಜೀವದ ಹಂಗು ತೊರೆದು ಹಗಲಿರುಳು ದುಡಿದವರು ಇದೇ ಆಶಾ ಕಾರ್ಯಕರ್ತೆಯರು. ಬಿಸಿಲು, ಮಳೆ ಎನ್ನದೆ ಹಳ್ಳಿಹಳ್ಳಿಗಳಿಗೆ ತೆರಳಿ ಜನರ ಆರೋಗ್ಯದ ಕಾಳಜಿ ವಹಿಸುವ ಅವರ ಸೇವೆಯನ್ನು ಇಂದು ಸಚಿವರು ಕೇವಲ ಸಂಬಳದ ಲೆಕ್ಕಾಚಾರದಲ್ಲಿ ಅಳೆಯುತ್ತಿರುವುದು ದುರದೃಷ್ಟಕರ.
ಹತ್ತು ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ನೋವು ಮತ್ತು ಸಂಕಷ್ಟಗಳನ್ನು ಆಲಿಸುವ ಬದಲು, ಅವರಿಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತದೆ ಎಂಬ ಮಾತುಗಳನ್ನು ಆಡುವುದು ಸಚಿವರ ಜವಾಬ್ದಾರಿಯುತ ಸ್ಥಾನಕ್ಕೆ ಶೋಭೆ ತರುವುದಿಲ್ಲ.
ನರ್ಸ್ಗಳಿಗೆ ಇಷ್ಟು ಸಂಬಳ, ಶಿಕ್ಷಕರಿಗೆ ಅಷ್ಟು ಸಂಬಳ ಎಂದು ಹೋಲಿಕೆ ಮಾಡುವ ಸಚಿವರು, ಆಶಾ ಕಾರ್ಯಕರ್ತೆಯರು ನಿರ್ವಹಿಸುವ ಅಪಾರ ಜವಾಬ್ದಾರಿ ಮತ್ತು ಅವರ ಕುಟುಂಬಗಳ ಜೀವನ ನಿರ್ವಹಣೆಯ ಸಂಕಷ್ಟವನ್ನು ಅರ್ಥಮಾಡಿಕೊಳ್ಳಬೇಕು. ಇತರ ನೌಕರರ ವೇತನವನ್ನು ಉದಾಹರಣೆಯಾಗಿ ನೀಡಿ ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳದ ಬೇಡಿಕೆಯನ್ನು ತಳ್ಳಿಹಾಕುವುದು ಸರಿಯಾದ ಆಡಳಿತ ನೀತಿಯಲ್ಲ.
ತಮಿಳುನಾಡಿನಲ್ಲಿ ಆಶಾ ಕಾರ್ಯಕರ್ತೆಯರ ವ್ಯವಸ್ಥೆ ಇಲ್ಲ ಎಂಬ ಉದಾಹರಣೆ ನೀಡುವ ಸಚಿವರು, ಅಲ್ಲಿನ ಆರೋಗ್ಯ ವ್ಯವಸ್ಥೆಯ ಮಾದರಿಯನ್ನು ಸಮಗ್ರವಾಗಿ ಅಧ್ಯಯನ ಮಾಡಲಿ. ಒಂದು ವ್ಯವಸ್ಥೆಯಲ್ಲಿನ ವ್ಯತ್ಯಾಸವನ್ನು ಮುಂದಿಟ್ಟುಕೊಂಡು ನಮ್ಮ ರಾಜ್ಯದ ಸಾವಿರಾರು ಮಹಿಳಾ ಕಾರ್ಯಕರ್ತೆಯರ ಸೇವೆಯನ್ನು ಕಡೆಗಣಿಸುವುದು ಸರಿಯಲ್ಲ.
ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಕಾಂಗ್ರೆಸ್ ಸರ್ಕಾರ, ದುಡಿಯುವ ಮಹಿಳೆಯರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸಲು ಹಿಂದೇಟು ಹಾಕುತ್ತಿರುವುದೇಕೆ?
ಆಶಾ ಕಾರ್ಯಕರ್ತೆಯರು ಸರ್ಕಾರದ ಮೇಲೆ ಹೊರೆ ಅಲ್ಲ; ಅವರು ರಾಜ್ಯದ ಆರೋಗ್ಯ ವ್ಯವಸ್ಥೆಯ ಅಮೂಲ್ಯ ಆಸ್ತಿ. ಅವರ ಹೋರಾಟವನ್ನು ದಮನಿಸುವ ಅಥವಾ ಅವರ ಸೇವೆಯನ್ನು ಕೀಳಾಗಿ ಕಾಣುವ ಪ್ರಯತ್ನವನ್ನು ಭಾರತೀಯ ಜನತಾ ಪಾರ್ಟಿಯ ಮಹಿಳಾ ಮೋರ್ಚಾ ಖಂಡಿಸುತ್ತದೆ.











