ಎನ್ನೆಂಸಿ; ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ : ಶಿಕ್ಷಣದ ಮೂಲಕ ಪ್ರತಿಯೊಂದು ಮನೆ ಬೆಳಗಬೇಕು, ಪ್ರತಿಯೊಬ್ಬನ ಬದುಕಿನಲ್ಲಿ ಹೊಸ ಭರವಸೆ ಮೂಡಬೇಕು: ಉಮೇಶ್ ಎಂ.ಪಿ- ಕಹಳೆ ನ್ಯೂಸ್

ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಉತ್ತಮ ನಾಗರಿಕರನ್ನಾಗಿ ರೂಪಿಸುವಲ್ಲಿ ನೆಹರೂ ಮೆಮೋರಿಯಲ್ ಕಾಲೇಜಿನ ಕೊಡುಗೆ ಅನನ್ಯವಾಗಿದೆ ಎಂದು ಎನ್.ಎಂ.ಸಿ ಹಿರಿಯ ವಿದ್ಯಾರ್ಥಿ, ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆಯ ಸ್ಥಾಪಕರಾದ ಎಂ ಪಿ ಉಮೇಶ್ ಹೇಳಿದರು. ಇವರು ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಅ.15ನೇ ಗುರುವಾರದಂದು ಶಿಕ್ಷಕ ರಕ್ಷಕ ಸಂಘದ ವಾರ್ಷಿಕ ಮಹಾಸಭೆಯನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಶಿಕ್ಷಣವು ಕೇವಲ ಒಬ್ಬ ವ್ಯಕ್ತಿಯ ಭವಿಷ್ಯವನ್ನು ರೂಪಿಸುವ ಸಾಧನವಲ್ಲ; ಅದು ಇಡೀ ಸಮಾಜದ ಅಭಿವೃದ್ಧಿಗೆ ಭದ್ರ ಬುನಾದಿಯಾಗಿದೆ. ಪ್ರತಿಯೊಂದು ಮನೆಯಲ್ಲೂ ಶಿಕ್ಷಣದ ಬೆಳಕು ಮೂಡಿದಾಗ ಕುಟುಂಬದ ಪ್ರಗತಿಯ ಜೊತೆಗೆ ಸಮಾಜದ ಅಭಿವೃದ್ಧಿಯೂ ಸಾಧ್ಯವಾಗುತ್ತದೆ. ಶಿಕ್ಷಣದ ಮೂಲಕ ಪ್ರತಿಯೊಂದು ಮನೆ ಬೆಳಗಬೇಕು, ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕಿನಲ್ಲಿ ಹೊಸ ಭರವಸೆ ಮೂಡಬೇಕು. ಈ ನಿಟ್ಟಿನಲ್ಲಿ ನೆಹರೂ ಮೆಮೋರಿಯಲ್ ಕಾಲೇಜು ಕಳೆದ ಐದು ದಶಕಗಳಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅವಕಾಶ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ರಿ. ಸುಳ್ಯದ ಅಧ್ಯಕ್ಷರಾದ ಡಾ. ಕೆ ವಿ ಚಿದಾನಂದರು ಮಾತನಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಮಾತ್ರವಲ್ಲದೆ, ಅವರಲ್ಲಿ ಶಿಸ್ತು, ಸಂಸ್ಕಾರ, ಮಾನವೀಯ ಮೌಲ್ಯಗಳು, ಆತ್ಮವಿಶ್ವಾಸ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದು ಕೂಡ ನಮ್ಮ ಕರ್ತವ್ಯವಾಗಿದೆ. ಈ ಕಾರ್ಯದಲ್ಲಿ ಉಪನ್ಯಾಸಕರಷ್ಟೇ ಅಲ್ಲದೆ ಪೋಷಕರ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ. ಪೋಷಕರು ತಮ್ಮ ಮಕ್ಕಳೊಂದಿಗೆ ನಿರಂತರ ಸಂವಹನದಲ್ಲಿದ್ದು, ಅವರ ಆಸಕ್ತಿ, ಸಾಮರ್ಥ್ಯ ಮತ್ತು ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು ಮಾತನಾಡಿ, ಕಾಲೇಜಿನ ಸಮಗ್ರ ಅಭಿವೃದ್ಧಿಯನ್ನು ಬೆಳೆಸುವಲ್ಲಿ ರಕ್ಷಕ ಶಿಕ್ಷಕ ಸಂಘ ಬಹಳ ಮುಖ್ಯ ಎಂದು, ಮುಂದೆ ನಡೆಯುವ ಕಾಲೇಜಿನ ಸುವರ್ಣ ಸಂಭ್ರಮೋತ್ಸವದಲ್ಲಿ ಎಲ್ಲಾ ಪೋಷಕ ವೃಂದದ ಸಹಕಾರವನ್ನು ಕೋರಿದರು.
ಸಭೆಯಲ್ಲಿ ರಕ್ಷಕ ಶಿಕ್ಷಕ ಸಂಘದ 2026-27ನೇ ಶೈಕ್ಷಣಿಕ ವರ್ಷದ ಪೋಷಕ ಪ್ರತಿನಿಧಿಗಳನ್ನು ಆರಿಸಿ ಅವರ ಮೂಲಕ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷೆಯಾಗಿ ಶಶ್ಮಿ ಭಟ್ ಮರುಆಯ್ಕೆಗೊಂಡು, ಉಪಾಧ್ಯಕ್ಷರಾಗಿ ಕೃಷ್ಣಪ್ರಸಾದ್ ಮಾಡಬಾಗಿಲು ಆಯ್ಕೆಯಾದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ ಎಂ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶಶ್ಮಿ ಭಟ್, ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ ಸಂಯೋಜಕಿ ಡಾ. ಮಮತ ಕೆ ಮತ್ತು ವಿದ್ಯಾರ್ಥಿ ಕ್ಷೇಮಪಾಲಾನಾಧಿಕಾರಿ ಶೀಧರ್ ವಿ ಉಪಸ್ಥಿತರಿದ್ದರು.
ಅಂತಿಮ ಬಿ.ಎಸ್ಸಿ ವಿದ್ಯಾರ್ಥಿನಿಯರಾದ ಕು. ಪ್ರಾರ್ಥನಾ ಮತ್ತು ಕು. ಕವನ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕ ರಕ್ಷಕ ಸಂಘದ ಕಾರ್ಯದರ್ಶಿ ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ಗೀತಾ ಶೆಣೈ ಸ್ವಾಗತಿಸಿ, ಅಶ್ವಿನಿ ಕೆ ಸಿ ಅತಿಥಿಗಳನ್ನು ಪರಿಚಯಿಸಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀಧರ್ ವಿ ವಂದಿಸಿದರು. ಅರ್ಥಶಾಸ್ತ್ರ ಉಪನ್ಯಾಸಕರಾದ ವಿಷ್ಣುಪ್ರಶಾಂತ್ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನೆರವೇರಿಸಿದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕುಲದೀಪ್ ಪೆಲ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಹರಿಪ್ರಸಾದ್, ದಿವ್ಯಾ, ಸಿಂಧೂ, ಪ್ರೇಮಲತಾ, ಡಾ. ಉಮೇಶ್, ರಮ್ಯಾ ದಿನೇಶ್ ಇನ್ನಿತರರು ಸಹಕರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಪೋಷಕ ವೃಂದದವರು, ಭೋದಕ ಭೋದಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಭೆಯ ನಂತರ ಎಲ್ಲಾ ಪೋಷಕರು ಅವರ ಮಕ್ಕಳ ಪ್ರಗತಿಯ ಬಗ್ಗೆ ಶಿಕ್ಷಕರ ಜೊತೆ ಸಮಾಲೋಚಿಸಿದರು.











