Monday, September 28, 2026
ಸುದ್ದಿ

ವೀರಶೈವ ಲಿಂಗಾಯತರು ಎಲ್ಲಾ ಸಮಾಜಗಳನ್ನು ಒಗ್ಗೂಡಿಸಬೇಕು: ಸಿಎಂ ಡಿ ಕೆ ಶಿವಕುಮಾರ್ ಮನವಿ-ಕಹಳೆನ್ಯೂಸ್

ಬೆಂಗಳೂರು : “ವೀರಶೈವ ಲಿಂಗಾಯತರು ತಾವು ಒಗ್ಗಟ್ಟಾಗಿದ್ದರೆ ಸಾಲದು. ಇಡೀ ರಾಜ್ಯವನ್ನು ಎಲ್ಲಾ ಸಮಾಜಗಳನ್ನು ಒಗ್ಗೂಡಿಸಬೇಕು. ಇದು ನಿಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕರೆ ನೀಡಿದರು.

ಜಾಹೀರಾತು

ಸಿಎಂ ಡಿ ಕೆ ಶಿವಕುಮಾರ್ ಅವರು ಬೆಂಗಳೂರಿನ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಭಾನುವಾರ ನಡೆದ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

“ವಿಶ್ವದ ಮೊದಲ ಸಂಸತ್ತನ್ನು ಪರಿಚಯಿಸಿದ್ದು ಬಸವಣ್ಣನವರು. ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟಿದ್ದು ವೀರಶೈವ ಲಿಂಗಾಯತ ಧರ್ಮ. ಹಾಗಾಗಿ, ಬಸವಣ್ಣನವರವನ್ನು ವಿಶ್ವಗುರು ಎಂದು ಕರೆಯುತ್ತೇವೆ. ಮಾನವ ಧರ್ಮಕ್ಕೆ ಜಯವಾಗಲಿ, ವಿಶ್ವಕ್ಕೆ ಧರ್ಮದಿಂದಲೇ ಶಾಂತಿ ಎಂದು ನಮ್ಮ ವೀರಗಂಗಾಧರ ಅಜ್ಜ ಅವರು ಹೇಳಿದರು. ನಾನು ಇಲ್ಲಿರುವ ಎಲ್ಲಾ ಮಠಾಧೀಶರನ್ನು ಕೇಳಿಕೊಳ್ಳುವುದು ಇಷ್ಟೇ. ಮಾನವ ಧರ್ಮದ ಪ್ರತಿಪಾದನೆಯಿಂದಲೇ ಮಠಗಳಿಗೆ ಶಕ್ತಿ, ಬಲ ಬರುತ್ತದೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂದು ಸಾರಿದ ವೀರಶೈವ ಧರ್ಮವನ್ನು ಕಾಪಾಡಬೇಕು” ಎಂದು ಹೇಳಿದರು.

“ವೀರಶೈಧರ್ಮದ ಆರ್ಥಿಕವಾಗಿ ಸಬಲರಾಗಿರುವ ಮಠಗಳು ಸರ್ಕಾರಕ್ಕೆ ಸರಿಸಮನಾಗಿ ಸಮಾಜದ ಎಲ್ಲಾ ಧರ್ಮದ ವಿದ್ಯಾರ್ಥಿಗಳಿಗೆ ಸಂಸ್ಕಾರ, ಶಿಕ್ಷಣ, ಜ್ಞಾನ, ಅಕ್ಷರದಾಸೋಹವನ್ನು ಮಾಡುತ್ತಿದೆ. ಇಂಥ ಅನನ್ಯ ಕಾರ್ಯದಲ್ಲಿ ತೊಡಗಿರುವ ಎಲ್ಲ ಮಠಗಳಿಗೂ ನನ್ನ ಸಾಷ್ಟಾಂಗ ನಮಸ್ಕಾರಗಳು” ಎಂದರು.

“ಇಡೀ ಕರ್ನಾಟಕದಲ್ಲಿ ಅತಿ ಹೆಚ್ಚು ಶಿಕ್ಷಣ ಸಂಸ್ಥೆಗಳು ಹೊಂದಿರುವುದು ಲಿಂಗಾಯತ ಮಠಗಳು. ಪ್ರಪಂಚದ ನಾನಾ ಭಾಗಗಳಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿವಿಧ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಬಿ.ಡಿ ಜತ್ತಿಯವರು ಪಂಚಾಯಿತಿ ಸದಸ್ಯತ್ವದಿಂದ- ರಾಷ್ಟ್ರಪತಿಯಂಥ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದರು ಎನ್ನುವುದನ್ನು ಸ್ಮರಿಸಿಕೊಳ್ಳಬೇಕು” ಎಂದು ತಿಳಿಸಿದರು.

“ಒಗ್ಗಟ್ಟಿನಲ್ಲಿ ಶಕ್ತಿ ಇದೆ. ಅರಿವಿನಲ್ಲಿ ಬೆಳಕು, ಕಾಯಕದಲ್ಲಿ ಗೌರವವಿದೆ, ದಾಸೋದಲ್ಲಿ ಮಾನವೀಯತೆ ಇದೆ ಎಂದು ಸಾರಿದ್ದು ಲಿಂಗಾಯತ ಧರ್ಮ. ನೀವು ಜಾತಿ ಬೇಡ ಅಂದರೂ ಜಾತಿಗೆ ನೀವು ಬೇಕಾಗುತ್ತದೆ” ಎಂದರು.

“ಹುಟ್ಟುವಾಗ ಯಾರೂ ಕೂಡ ಇಂಥ ಜಾತಿಯಲ್ಲೇ ಹುಟ್ಟಬೇಕು ಅಂತ ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ಕೊನೆಗೆ ಮಠ ಬೇಡ, ಧರ್ಮ ಬೇಡ ಎಂದು ಹೇಳುವವರು ಇದ್ದಾರೆ. ಮಗುವಿಗೆ ಮೂಗು ಚುಚ್ಚುವಾಗ, ಕಿವಿ ಚುಚ್ಚುವಾಗ, ನಾಮಕರಣ ಮಾಡುವಾಗ ಯಾವುದೋ ಒಂದು ಸಿದ್ದಾಂತ, ಧರ್ಮ ಬರಲೇಬೇಕು. ಸತ್ತಾಗ ಮಣ್ಣು ಮಾಡಬೇಕೋ, ಅಗ್ನಿಸ್ಪರ್ಷ ಮಾಡಬೇಕು ಎಂದು ತೀರ್ಮಾನಿಸುವುದು ಧರ್ಮ” ಎಂದು ವಿವರಿಸಿದರು.

*ಗುರು-ಲಿಂಗ-ಜಂಗಮ, ಈ ಮೂರು ಪದಗಳಲ್ಲಿ ಲಿಂಗಾಯತ ಧರ್ಮದ ತತ್ವ ಅಡಗಿದೆ*

“ಜ್ಯೋತಿಯನ್ನು ಕತ್ತಲೆ ನಾಶ ಮಾಡುವುದಕ್ಕೆ ಬಳಸುತ್ತೇವೆ. ಜ್ಯೋತಿಯ ಹಿಂದೆ ಬತ್ತಿ, ಎಣ್ಣೆ ಇರುವುದು ನಮಗೆ ಕಾಣುವುದಿಲ್ಲ. ಬೆಳಗುವ ಬೆಳಕು ಮಾತ್ರ ಕಾಣುತ್ತದೆ. ಸತ್ಯದ ಬಲದಿಂದ ಅಸತ್ಯ, ಅಧರ್ಮವನ್ನು ನಾಶ ಮಾಡಲಿಕ್ಕೆ ಬೆಳಕನ್ನು ಪ್ರಯೋಗಿಸುತ್ತಿದ್ದೇವೆ. ಗುರು-ಲಿಂಗ-ಜಂಗಮ ಈ ಮೂರು ಪದಗಳಲ್ಲಿ ಲಿಂಗಾಯತ ಧರ್ಮದ ತತ್ವ ಅಡಗಿದೆ” ಎಂದು ಬಣ್ಣಿಸಿದರು.

“ನಾನು ಹುಟ್ಟುವಾಗ ಒಕ್ಕಲಿಗ. ನನಗೆ ಅರಿವು ಕೊಟ್ಟುವರು ವೀರ ಗಂಗಾಗಧರ ಅಜ್ಜಯ್ಯ. ನಾನು ಅಜ್ಜಯ್ಯನ ಹೆಸರಲ್ಲಿ ಪ್ರಮಾಣ ಸ್ವೀಕಾರ ಮಾಡಿದಾಗ ಬೇಕಾದಷ್ಟು ಟೀಕೆಗಳು ಬಂದವು. ರಾಷ್ಟ್ರದ ಅನೇಕ ನಾಯಕರು, ನ್ಯಾಯವಾದಿಗಳು ಈ ಬಗ್ಗೆ ಕೇಳಿದರು. ಎಲ್ಲರಿಗೂ ಅಜ್ಜಯ್ಯನ ಶಕ್ತಿಯ ಬಗ್ಗೆ ಹೇಳಿದ್ದೇನೆ. ಪ್ರಚಾರಕ್ಕಾಗಿ ನನ್ನ ಅಜ್ಜನ ಹೆಸರನ್ನು ಬಳಸುವುದಕ್ಕೆ ನಾನು ತಯಾರಿಲ್ಲ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ಭಕ್ತಿಯನ್ನು, ಆಶೀರ್ವಾದವನ್ನು ಅನುಭವಿಸಬೇಕು” ಎಂದು ಹೇಳಿದರು.

“ನಾನು ಬಸವಣ್ಣನವರ ಹಾದಿಯಲ್ಲಿ, ಪ್ರಜಾಸವೇಕನಾಗಿ ನಡೆಯುತ್ತಿದ್ದೇನೆ. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಅಂತ ಘೋಷಣೆ ಮಾಡಿದ್ದು ನಮ್ಮ ಸರ್ಕಾರ. ಬೇರೆಯವರ ಕೆಲಸಗಳ ಬಗ್ಗೆ ಟೀಕೆ ಮಾಡುವುದಕ್ಕೆ ಹೋಗುವುದಿಲ್ಲ. ದೇವರು ವರವನ್ನು ಕೊಡುವುದಿಲ್ಲ, ಶಾಪವನ್ನು ಕೊಡುವುದಿಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ಕೊಟ್ಟ ಅವಕಾಶದಲ್ಲಿ ಏನು ಮಾಡುತ್ತೇವೆ ಎನ್ನುವುದು ಬಹಳ ಮುಖ್ಯ” ಎಂದರು

*ಮಠಾಧೀಶರು, ಭಕ್ತರು ಉಳಿದುಕೊಳ್ಳಲು ಎರಡು ಎಕರೆ ಜಾಗ*

“ಹೊರ ಊರುಗಳಿಂದ ಬಂದ ಮಠಾಧೀಶರು, ಭಕ್ತರು ಉಳಿದುಕೊಳ್ಳಲು ಜಾಗ ಬೇಕು ಅಂತ ನೀವೆಲ್ಲಾ ಮನವಿ ಮಾಡಿದ್ದೀರಿ. ಹೊರವಲಯದಲ್ಲಿ ಇದಕ್ಕಾಗಿ ಎರಡು ಎಕರೆ ಜಾಗ ಕೊಡುತ್ತೇನೆ. ವೀರಗಂಗಾಧರ ಹೆಸರು ಇಡುತ್ತೀರೋ, ಬೇರೆ ಯಾರ ಹೆಸರು ಇಡುತ್ತೀರೋ ನಿಮಗೆ ಬಿಟ್ಟ ವಿಚಾರ. ಅವರ ಆಶಯವನ್ನು ಜಾರಿ ಮಾಡಿ. ಜಾಗ ನಮ್ಮದು. ಕಟ್ಟಡ ನಿಮ್ಮದು” ಎಂದರು.

“ಕಾಲ, ಸಮಸ್ಯೆ ಬದಲಾಗಬಹುದು. ಮೌಲ್ಯ ಬದಲಾಗಬಾರದು. ಉಪಕಾರ ಸ್ಮರಣೆ ಇರಬೇಕು. ನುಡಿದರೆ ಮುತ್ತಿನ ಹಾರದಂತೆ ಇರಬೇಕು. ಲಿಂಗ ಮೆಚ್ಚುವಂತಿರಬೇಕು ಎಂದಿದ್ದಾರೆ ಬಸವಣ್ಣನವರು. ಕಾಯಕವೇ ಕೈಲಾಸ ಅಂತ ನಂಬಿದ್ದೇನೆ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನಿಮ್ಮನ್ನು ರಕ್ಷಣೆ ಮಾಡುವ ವ್ಯಕ್ತಿ ನನಗಿಂತ ಮತ್ತೊಬ್ಬರು ಸಿಗಲು ಸಾಧ್ಯವಿಲ್ಲ” ಎಂದರು.

“ಧರ್ಮದ ತತ್ವ ನಾವೆಲ್ಲ ತಿಳಿದುಕೊಳ್ಳಬೇಕು. ಎಲ್ಲಾ ಜಾತಿ, ಎಲ್ಲಾ ಧರ್ಮದ ಮಠಗಳನ್ನು ಪ್ರೋತ್ಸಾಹಿಸಬೇಕು. ವೀರಶೈವ ಲಿಂಗಾಯತ ಧರ್ಮದ ಅನೇಕ ಮಠಗಳು ಈ ಕೆಲಸ ಮಾಡಿಕೊಂಡು ಬರುತ್ತಿದೆ. ಬಸವಣ್ಣನವರ ಆದಿಯಾಗಿ ನೂರಾರು ಮಠಾಧೀಶರು ತೋರಿದ ಧರ್ಮದ ಹಾದಿಯಲ್ಲಿ ನಾವೆಲ್ಲ ನಡೆಯೋಣ. ಧರ್ಮಯಾವುದರು ತತ್ವ ಒಂದೇ. ನಾಮ ನೂರಾದರು ದೈವ ಒಂದೇ. ಪೂಜೆ ಯಾವುದಾದರು ಭಕ್ತಿ ಒಂದೇ. ಕರ್ಮಯಾವುದಾದರೂ ನಿಷ್ಟೆ ಒಂದೇ. ದೇವನೊಬ್ಬ ನಾಮ ಹಲವು. ಗಣೇಶ, ಶಿವನನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತೇವೆ. ರಾಮ, ರಾವಣ, ಹನುಮಂತನ ಜಾತಿಯ ಬಗ್ಗೆ ವಿಮರ್ಶೆಗಳು ನಡೆಯುತ್ತಿವೆ’ ಎಂದರು.

*ಸೇವೆ ಮಾಡುವವರನ್ನು ಸಮಾಜ ಗುರುತಿಟ್ಟುಕೊಳ್ಳುತ್ತದೆ*

“ನಾನು ಇವತ್ತು ಬರುವಾಗ ಹನುಮಂತನ ಗುಡಿಗಳನ್ನು ನೋಡಿದೆ. ರಾಮನ ತಂದೆ ದಶರಥನ ದೇವಾಲಯ ಎಲ್ಲೂ ಇಲ್ಲ. ಹನುಮಂತನ ದೇವಾಲಯ ಜಾಸ್ತಿ ಇವೆ. ಏಕೆಂದರೆ, ಹನುಮಂತ ಸೇವಕ. ಸೇವೆಯ ಪ್ರತೀಕ. ಈ ಸಮಾಜ, ಸೇವೆ ಮಾಡುವವರನ್ನು ಗುರುತಿಸುತ್ತದೆ. ನೆನಪಿಟ್ಟುಕೊಳ್ಳುತ್ತದೆ” ಎಂದರು.

*ಭಕ್ತಿಯೇ ಜಾತಿ, ಕರ್ಮವೇ ಧರ್ಮ ಎಂದು ಸಾರಿದ ಏಕೈಕ ಧರ್ಮ, ವೀರಶೈವ ಧರ್ಮ*

‘ಬುದ್ಧ ಪ್ರೀತಿ, ಶಾಂತಿಯ ಸಂಕೇತ. ದುರ್ಯೋಧನ ಅಂದರೆ ಹಠ. ಧರ್ಮರಾಯನ ಧರ್ಮ, ಭೀಷ್ಮನ ಪ್ರತಿಜ್ಞೆ, ಕೃಷ್ಣನ ತಂತ್ರಗಾರಿಕೆ ಎಲ್ಲವನ್ನೂ ನಾವು ಪುರಾಣದಿಂದ ಅರಿತಿದ್ದೇವೆ. ಆದರೆ, ಭಕ್ತಿಯಿಂದಲೇ ಮುಕ್ತಿ. ಸೇವೆಯಿಂದಲೇ ಶಕ್ತಿ, ಸಹನೆ ಇಂದಲೇ ದೈವತ್ವ. ಕಾಯಕದಿಂದಲೇ ಸುಖ ಎಂಬುದನ್ನು ನಮ್ಮ ಬಸವಣ್ಣನವರು ಸಾರಿದರು. ಲಿಂಗಾಯತ ಧರ್ಮ ಕೂಡ ಇದನ್ನೇ ಹೇಳುತ್ತದೆ. ನನ್ನ ಭಕ್ತಿಯೇ ಜಾತಿ, ನನ್ನ ಕರ್ಮವೇ ಧರ್ಮ ಎಂದು ಸಾರಿದ ಏಕೈಕ ಧರ್ಮ ವಿರಶೈವ ಧರ್ಮ” ಎಂದು ಕೊಂಡಾಡಿದರು.

“ಬೂದಿಯಿಂದ ವಿಭೂತಿ, ನೀರಿನಿಂದ ತೀರ್ಥ, ಅಕ್ಕಿ-ಅರಿಷಣ ಮಂತ್ರಾಕ್ಷತೆ ಆಗುತ್ತದೆ. ಕೊಬ್ಬರಿ ಪ್ರಸಾದವಾಗುತ್ತದೆ. ಅನ್ನ ನೈವೇದ್ಯವಾಗುತ್ತದೆ. ವೀರಶೈವ ಸಮಾಜದಿಂದ ಸಮಾಜ ಯಾವಗಲೂ ಸುಖವಾಗಿರುತ್ತದೆ. ದರ್ಪದ ಬದಲು ಧರ್ಮ ಇರಬೇಕು. ಕೋಪದ ಬದಲು ಕಾಯಕ ಇರಬೇಕು ಇದನ್ನು ನಮ್ಮ ಹಿರಿಯರು ಹೇಳಿಕೊಟ್ಟಿದ್ದಾರೆ. ಹೊಟ್ಟೆ ಹಸಿದಾಗ ಅನ್ನ, ರಟ್ಟೆ ಇದ್ದೋನು ದುಡಿಯಬೇಕು. ನೆತ್ತಿ ಇದ್ದೋನು ಓದಬೇಕು. ಇದೇ ವೀರಶೈವ ಲಿಂಗಾಯತ ಧರ್ಮದ ತತ್ವ. ನಮ್ಮೆಲ್ಲರ ಮನಸ್ಸು ನಿರ್ಮಲವಾದರೆ ಅದೇ ಸಾಕ್ಷಾತ್ಕಾರ. ಮಾತು ಮೃದುವಾದರೆ ಚಮತ್ಕಾರ. ನಡೆ ಶುದ್ಧವಾದರೆ ಪುರಸ್ಕಾರ. ಇವೆಲ್ಲದರಿಂದಲೇ ಶಿವನ ಸಾಕ್ಷಾತ್ಕಾರ” ಎಂದರು.

“ನನ್ನ ಜನ್ಮತಾಳುವಾಗ ನನ್ನ ತಾಯಿ ಕೆಂಪೇಗೌಡರ ಧರ್ಮ ಪತ್ನಿ ಗೌರಮ್ಮ. ನಮ್ಮ ಊರಿನ ಪಕ್ಕದಲ್ಲಿ ಶಿವಾಲಯದ ಮೂರ್ತಿ ಬೆಟ್ಟ ಇದೆ. ಮಗುವಾದರೆ ಶಿವನ ಹೆಸರು ಇಡುತ್ತೇನೆ ಎಂದು ಶಿವಕುಮಾರ್ ಅಂತ ಇಟ್ಟರು. ನಮ್ಮ ಕುಟುಂಬದಲ್ಲಿ ಮಗು ಹುಟ್ಟಿದ ತಕ್ಷಣ ಕೆಂಪೇಗೌಡ ಅಂತ ಹೆಸರಿಡುವ ಪದ್ಧತಿ ಇದೆ. ಆದರೆ, ನಾನು ಹುಟ್ಟುವುದು ತಡವಾಯ್ತು ಅಂತ ನನ್ನ ತಾಯಿ ಗೌರಮ್ಮ ನಮ್ಮೂರ ಪಕ್ಕದ ಬೆಟ್ಟದಲ್ಲಿರುವ ಶಿವಾಲಯ ಮೂರ್ತಿಗೆ ಅರಸಿಕೊಂಡರಂತೆ. ಹಾಗಾಗಿ, ನನ್ನ ಹೆಸರನ್ನು ಶಿವಕುಮಾರ ಅಂತ ಇಟ್ಟರು. ಕಾಕತಾಳೀಯ ಅಂದರೆ ಗಂಗಾಧರ ಅಜ್ಜ ಸ್ಥಾಪನೆ ಮಾಡಿರುವ ರೇಣುಕಾಚಾರ್ಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದೆ. ಅವರ ಪಾದ ಸ್ಪರ್ಷ ಮಾಡಿದಾಗ 8ನೇ ಅದ್ಬುತ ಅನಿಸಿತು. ಹಾಗಾಗಿ, ಅವರಿಗೆ ಶರಣಾದೆ. ಅಂದಿನಿಂದ ಇಂದಿನವರೆಗೆ ನನ್ನ ಪ್ರತಿ ನಿಮಿಷ, ಗಳಿಗೆ, ಮಾತು ಅವರ ಆಶೀರ್ವಾದಿಂದ ಬರುತ್ತಿದೆ ಅಂತ ನಂಬಿದ್ದೇನೆ” ಎಂದು ತಿಳಿಸಿದರು.