Monday, September 28, 2026
ಸುದ್ದಿ

ಸರಕಾರಿ ಲೇಡೀಗೋಶನ್ ಆಸ್ಪತ್ರೆ ಮತ್ತು ಕೆ.ಎಂ.ಸಿ.ತಜ್ಞರ ಜಂಟಿ ಪರಿಶ್ರಮದಿಂದ ಪುನರ್ಜನ್ಮ ಪಡೆದ ಜೀವನ್ಮರಣ ಹೋರಾಟದಲ್ಲಿದ್ದ ಗರ್ಭಿಣಿ ಮಹಿಳೆ -ಕಹಳೆ ನ್ಯೂಸ್

ಮಂಗಳೂರು: ಸಮಾಜಮುಖಿ ಹಾಗೂ ಮಹಿಳಾಪರ ಸೇವೆಗಳಿಂದ ಆರೋಗ್ಯ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಮಂಗಳೂರಿನ ಸರಕಾರಿ ಲೇಡಿಗೋಷನ್ ಆಸ್ಪತ್ರೆ ಖಾಸಗಿ ಆಸ್ಪತ್ರೆಯವರು ಕೈ ಚೆಲ್ಲಿದ ಪ್ರಕರಣದ ಜೀವನ್ಮರಣ ಹೋರಾಟದಲ್ಲಿದ್ದ ಮಹಿಳೆಯೊಬ್ಬರಿಗೆ ಜೀವದಾನ ಮಾಡಿ ತನ್ನ ಸೇವಾಪರತೆಯ ವೈಶಿಷ್ಟ್ಯತೆಯನ್ನು ಮತ್ತೆ ಮೆರೆದು ದಾಖಲೆ ನಿರ್ಮಿಸಿದೆ.

ಜಾಹೀರಾತು

ಹಿನ್ನೆಲೆ : ಉತ್ತರ ಕನ್ನಡ ಜಿಲ್ಲೆಯ 33 ವಾರಗಳ ಗರ್ಭಾವದಿಯ ಗರ್ಭಿಣಿಯೊಬ್ಬರನ್ನು ಪ್ರಸವಪೂರ್ವ ರಕ್ತಸ್ರಾವದ ಕಾರಣದಿಂದಾಗಿ ಉಡುಪಿ ಜಿಲ್ಲೆಯ ಖಾಸಗಿ ಆಸ್ಪತ್ರೆ ಒಂದರಲ್ಲಿ ದಾಖಲುಗೊಳಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ರಿ ಮಹಿಳೆಯ ಅಲ್ಟ್ರಾಸೌಂಡ್ ಪರೀಕ್ಷೆ ಮಾಡಲಾಗಿ ಪ್ಲಾಸೆಂಟಾ ಅಥವಾ ಮಾಸು ಶಿಶು ತಾಯಿ ಗರ್ಭದಿಂದ ಹೊರಬರುವ ದಾರಿಗೆ ಅಡ್ಡವಾಗಿ ಇರುವುದು ಕಂಡು ಬಂದಿತ್ತು.ಅಲ್ಲದೆ ಪ್ಲಾಸೆಂಟಾ ಅಂಟಿಕೊಂಡಿರುವ ಜಾಗದ ವೈಪರೀತ್ಯಗಳಾದ ಪ್ಲಾಸೆಂಟಾ ಅಕ್ರೀಟಾ ಅಥವಾ ಪ್ಲಾಸೆಂಟಾ ಪರ್ಕ್ರೀಟಾ ಇದಾಗಿರುವ ಸಾಧ್ಯತೆ ಇತ್ತು.ಇವೆರಡು ಸನ್ನಿವೇಶಗಳಲ್ಲಿ ಪ್ಲಾಸೆಂಟಾದ ರಕ್ತನಾಳ ಮತ್ತು ಜೀವಕೋಶಗಳು ಗರ್ಭಾಶಯದ ಸ್ನಾಯು ಭಾಗವನ್ನು ಪ್ರವೇಶಿಸುವುದು ಮಾತ್ರವಲ್ಲದೆ ಕೆಲವು ಸಂದರ್ಭಗಳಲ್ಲಿ ಗರ್ಭಾಶಯದಿಂದಲೂ ಹೊರಬಂದು ಅದರ ಪಕ್ಕದಲ್ಲಿರುವ ಅಂಗವಾದ ಮೂತ್ರಕೋಶಕ್ಕೂ ಲಗ್ಗೆಯಿಡಬಹುದಾದ ಸ್ಥಿತಿ ಇರುತ್ತದೆ.

ಇಂಥ ವಿಲಕ್ಷಣ ಪರಿಸ್ಥಿತಿ ಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ತೆಗೆದುಕೊಳ್ಳುವ ರೋಗ ನಿರ್ಣಯವೇ ಮುಖ್ಯ. ಪ್ರಸೂತಿ ಸಂಬಂಧಿತ ಗಂಭೀರ ಪ್ಲಾಸೆಂಟಾ ಪರ್ಕ್ರೀಟಾದ ಕಥೆ ಇದಾಗಿದ್ದರೂ ಇಲ್ಲಿ ಮೂತ್ರಕೋಶಕ್ಕೆ ಗಂಭೀರ ಹಾನಿಯುಂಟಾಗಿರುವುದರಿಂದ ಮೂತ್ರಕೋಶ ತಜ್ಞರ ಅವಶ್ಯಕತೆ ಇದ್ದೇ ಇರುತ್ತದೆ.ಜೊತೆಯಲ್ಲಿ ಸಣ್ಣ ಕರುಳು ಅಥವಾ ದೊಡ್ಡ ಕರುಳಿಗೂ ಇದರಿಂದಾಗಿ ಗಾಯವಾಗಬಹುದಾಗಿರುವುದರಿಂದ ಸಾಮಾನ್ಯ ಶಸ್ತ್ರ ಚಿಕಿತ್ಸಾ ತಜ್ನರ ಪಾಲ್ಗೊಳ್ಳುವಿಕೆ ಕೂಡಾ ಅಷ್ಟೇ ಮಹತ್ವವನ್ನು ಪಡೆಯುತ್ತದೆ.

ಮುಂದುವರಿದು ಗರ್ಭಕೋಶವನ್ನೇ ಶಸ್ತ್ರ ಚಿಕಿತ್ಸಾ ಮುಖಾಂತರ ಕತ್ತರಿಸಿ ತೆಗೆಯುವುದು ಅನಿವಾರ್ಯವಾಗುತ್ತದೆ*.*ಸುಮಾರು 3 ಲೀಟರ್ ನಿಂದ 4 ಲೀಟರ್ ನಷ್ಟು ಮೌಲ್ಯಯುತ ರಕ್ತ ಪೋಲಾಗುವುದರಿಂದ ಈ ಗರ್ಭಿಣಿ ರೋಗಿಯನ್ನು ಬದುಕುಳಿಸುವುದೇ ಬಹುದೊಡ್ಢ ಸವಾಲು.

ಇಂಥಹ ಪರಿಸ್ಥಿತಿಯಲ್ಲಿ ತಾಯಿಮರಣಗಳು ಸಂಭವಿಸುವ ಸಂದರ್ಭವೇ ಅತ್ಯಧಿಕ.ಆದರೆ ಕಳೆದ ಒಂದೂವರೆ ವರ್ಷದಿಂದ ಅಳವಡಿಸಿಕೊಂಡ ಜೀವರಕ್ಷಕ ವಿಧಾನದಿಂದಾಗಿ ಈ ಮಾರಣಾಂತಿಕ ಸನ್ನಿವೇಶದಿಂದ ತಾಯಂದಿರನ್ನು ಉಳಿಸಿಕೊಳ್ಳಲಾಗಿದೆ.

ವಿವಿಧ ಅಂಗಾಂಗಗಳು ಇದರಲ್ಲಿ ಬಲಿಪಶುವಾಗುವುದರಿಂದ ಅಂಥ ಅಂಗಗಳಿಗೆ ಸಂಬಂಧಿತ ತಜ್ಞರು ಮತ್ತು ಸೂಪರ್ ಸ್ಪೆಶಾಲಿಟಿ ತಜ್ಞರನ್ನು ಮುಂಚಿತವಾಗಿಯೇ ಶಸ್ತ್ರ ಚಿಕಿತ್ಸಾಗಾರಕ್ಕೆ ಬರಮಾಡಿಕೊಂಡು ಅವರ ಉಪಸ್ಥಿತಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ.

ಗರ್ಭಿಣಿಯ ದೇಹದಿಂದ ಹೊರಹೊಮ್ಮುವ ಒಂದೊಂದು ಹನಿ ರಕ್ತವನ್ನು ಕನಿಷ್ಠಗೊಳಿಸಬೇಕೆನ್ನುವ ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ದುರ್ಗಾಪ್ರಸಾದ್.ಎಂ.ಆರ್.ಅವರ ಪರಿಕಲ್ಪನೆಯ ವಿಶೇಷ ಅಂಶವಾಗಿ ಈ ಪ್ರಕ್ರಿಯೆಯನ್ನು ಲೇಡಿಗೋಷನ್ ಆಸ್ಪತ್ರೆಯಲ್ಲಿ ಅನುಷ್ಠಾನಗೊಳಿಸಲಾಗಿದೆ.

ಸದ್ರಿ ಮಹಿಳೆಯನ್ನು ಕೂಡಾ ಬಹುವೈದ್ಯ ಜೀವರಕ್ಷಕ ಆರೈಕೆ ಪದ್ಧತಿಯನ್ನು ಅನುಪಾಲನೆ ಮಾಡಿ ಅತ್ಯಮೂಲ್ಯ ತಾಯಿಯ ಪ್ರಾಣವನ್ನು ಉಳಿಸಲಾಗಿದೆ.

ಸಂತಸದ ವಿಚಾರವೆಂದರೆ ಈ ರೀತಿಯ ನೈಪುಣ್ಯತೆಯ ಆರೈಕೆಯಿಂದ ಹೊಸ ಜೀವನ ಹಾಗೂ ಪುನರ್ಜನ್ಮವನ್ನು ಪಡೆದ ಸರದಿಯಲ್ಲಿ ಹತ್ತನೆಯ ಗರ್ಭಿಣಿ ಮಹಿಳೆ ಇವರಾಗಿರುತ್ತಾರೆ.

ಇಂಥ ಒಂದು ಅತ್ಯಮೂಲ್ಯ ಕಾರ್ಯದಲ್ಲಿ ಸಕಾಲಿಕ ನಿರ್ಣಯ ವನ್ನು ತೆಗೆದುಕೊಳ್ಳುವಲ್ಲಿ ಕೆ.ಎಂ.ಸಿ.ಪ್ರಸೂತಿ ವಿಭಾಗದ ಪ್ರೊಫೆಸರ್ ಡಾ.ನಿಖಿಲ್ ಶೆಟ್ಟಿ ಅವರ ಪಾತ್ರ ಹಿರಿದಾಗಿದ್ದು ಮುಖ್ಯ ಪ್ರಸೂತಿ ಶಸ್ತ್ರಚಿಕಿತ್ಸಕರಾಗಿ ಕರ್ತವ್ಯ ನಿರ್ವಹಿಸಿದರು.ಸೀನಿಯರ್ ರೆಸಿಡೆಂಟ್ ಡಾ.ಸುಶಾಮ್ ಶೆಟ್ಟಿ, ಅಸಿಸ್ಟೆಂಟ್ ಪ್ರೊಫೆಸರ್ ಗಳಾದ ಡಾ.ಗಗನ್ ದೀಪ್ ಕೌರ್ ಮತ್ತು ಡಾ.ಪ್ರಥ್ವಿ ಶೆಣೈ, ಜೂನಿಯರ್ ರೆಸಿಡೆಂಟ್ ಡಾ.ತನ್ವಿತಾ ಸಹಕರಿಸಿದರು.

ಕೆ.ಎಂ.ಸಿ.ಮೂತ್ರರೋಗ ಶಸ್ತ್ರಚಿಕಿತ್ಸಾ ತಜ್ಞರುಗಳಾದ ಡಾ.ಪ್ರಮೋದ್,ಡಾ.ಮೀಟ್,ಡಾ.ಶಿವಾನಂದ್ ನಿರಂತರ ನಾಲ್ಕು ಗಂಟೆಗಳ ಸತತ ಶಸ್ತ್ರ ಚಿಕಿತ್ಸಾ ಸೇವಾ ಪ್ರಯತ್ನದಿಂದ ಸಂಪೂರ್ಣ ಘಾಸಿಕೊಂಡ ಮೂತ್ರಕೋಶಕ್ಕೆ ಹೊಸ ವಿನ್ಯಾಸದ ಪೂರ್ವ ಚಿಕಿತ್ಸಾ ರೂಪವನ್ನು ನೀಡಿದರು.

.ಅರಿವಳಿಕೆ ತಜ್ಞರಾಗಿ ಕೆ.ಎಂ.ಸಿ.ಅಸೋಸಿಯೇಟ್ ಪ್ರೊಫೆಸರ್ ಡಾ.ಶಿಲ್ಪಾ ಶಸ್ತ್ರಚಿಕಿತ್ಸಾ ಸಮಯದಲ್ಲಿ ಆದ್ಯಂತವಾಗಿ ರೋಗಿಯ ಪ್ರಾಣ ಮಾನದಂಡಗಳ ಮೇಲೆ ತೀವ್ರ ನಿಗಾವನ್ನು ವಹಿಸಿದರು. ಅಪರಿಪಕ್ವ ಶಿಶುವನ್ನು ನವಜಾತ ಶಿಶು ವಿಭಾಗಕ್ಕೆ ಸ್ಥಳಾಂತರಗೊಳಿಸುವ ಮುಂಚಿತವಾಗಿ ಅಗತ್ಯ ತುರ್ತು ಆರೈಕೆಯನ್ನು ಮಕ್ಕಳ ತಜ್ಞೆ ಡಾ.ಆರುಷಿ ನಿರ್ವಹಿಸಿದರು.

ಶುಶ್ರೂಷಕಿ ಶ್ರೀಮತಿ ದೀಪಾ ಸಹಾಯಕರಾಗಿ ಸಕಾಲಿಕವಾಗಿ ಕರ್ತವ್ಯ ನಿರ್ವಹಿಸಿದರು.ಸರ್ವಸುಸಜ್ಜಿತವಾಗಿ ಸರ್ಕಾರದ ಅನುದಾನದಿಂದ ಪ್ರಾರಂಭಿಸಲ್ಪಟ್ಟ ಸರಕಾರಿ ಲೇಡಿಗೋಷನ್ ಆಸ್ಪತ್ರೆಯ ಅತ್ಯಾಧುನಿಕ ತಂತ್ರಜ್ಞಾನದ ಶಸ್ತ್ರಚಿಕಿತ್ಸಾಗಾರ ಮತ್ತು ಪ್ರಸೂತಿ ತೀವ್ರ ನಿಗಾ ಘಟಕ ಅಸಹಾಯಕ ಬಡಮಹಿಳೆಯ ಅಮೂಲ್ಯ ಪ್ರಾಣವನ್ನು ಉಳಿಸಿ ಸರಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ಅತ್ಯುನ್ನತ ಮೇರು ಪಂಕ್ತಿಯಲ್ಲಿ ನಿಂತಿರುವುದಂತೂ ಅಷ್ಟೇ ವಾಸ್ತವ.

ಗಮನಿಸಬೇಕಾದ ಅಂಶವೆಂದರೆ ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಗರ್ಭಿಣಿ,ಬಾಣಂತಿ ಹಾಗೂ ನವಜಾತ ಶಿಶುವಿನ ಆರೈಕೆ ಸರಕಾರದ ಜನನಿ ಶಿಶು ಸುರಕ್ಷಾ ಕಾರ್ಯಕ್ರಮದಂತೆ ಸಂಪೂರ್ಣ ಉಚಿತವಾಗಿರುತ್ತದೆ.

ಆದುದರಿಂದ ಸಾರ್ವಜನಿಕರು ಸರಕಾರಿ ಆರೋಗ್ಯ ವ್ಯವಸ್ಥೆಗಳನ್ನು ತಾತ್ಸಾರದಿಂದ ನೋಡದೆ ಬಡಜನತೆಯ ಜೀವ ಉಳಿಸುವ ಸಂಜೀವಿನಿ ಎಂದೇ ಗೌರವ ಭಾವನೆಯಿಂದ ನೋಡಬೇಕಿದೆ ಎಂದು ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ದುರ್ಗಾಪ್ರಸಾದ್. ಎಂ. ಆರ್. ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.