Wednesday, August 19, 2026
ಸುದ್ದಿ

ಸುಳ್ಯ ಎನ್ನೆoಸಿ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ವಿಶಿಷ್ಟ ಕೆಸರುಗದ್ದೆ ಕ್ರೀಡಾಕೂಟ – ಅರೆಭಾಷೆ ಸಂಸ್ಕೃತಿ ಮತ್ತು ಗ್ರಾಮೀಣ ಬದುಕಿನ ಅನಾವರಣ – ಕಹಳೆ ನ್ಯೂಸ್

ಸುಳ್ಯ: ಗ್ರಾಮೀಣ ಬದುಕಿನ ಸೊಗಡು, ಕೃಷಿ ಸಂಸ್ಕೃತಿಯ ವೈಶಿಷ್ಟ್ಯ, ಮಣ್ಣಿನೊಂದಿಗಿನ ಮನುಷ್ಯನ ಅವಿನಾಭಾವ ಸಂಬಂಧ ಹಾಗೂ ಸಾಂಪ್ರದಾಯಿಕ ಕ್ರೀಡೆಗಳ ಸಂಭ್ರಮವನ್ನು ಯುವಜನತೆಗೆ ಪರಿಚಯಿಸುವ ಉದ್ದೇಶದಿಂದ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ (ರಿ.) ವತಿಯಿಂದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಪ್ರಯೋಜಕತ್ವದಲ್ಲಿ ಆಯೋಜಿಸಲಾಗಿದ್ದ ‘ಗದ್ದೆಗಿಳಿವ ಗಮ್ಮತ್ತ್’ ಎಂಬ ವಿಶಿಷ್ಟ ಕೆಸರುಗದ್ದೆ ಕ್ರೀಡಾಕೂಟವು ಅಗಸ್ಟ್ 19ರಂದು ಮಂಗಳವಾರ ಅಜ್ಜಾವರದ ಕೊರಂಗುಬೈಲು ಗದ್ದೆಯಲ್ಲಿ ಅದ್ದೂರಿಯಾಗಿ ನಡೆಯಿತು.

ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಮಾತನಾಡಿ ಮಣ್ಣಿನೊಂದಿಗೆ ಯುವಜನರ ಸಂಬಂಧವನ್ನು ಗಟ್ಟಿಗೊಳಿಸುವುದು, ಕೃಷಿ ಪ್ರಧಾನ ಗ್ರಾಮೀಣ ಬದುಕಿನ ಮಹತ್ವವನ್ನು ಅರಿಯುವಂತೆ ಮಾಡುವುದು ಹಾಗೂ ಅರೆಭಾಷೆ ಪ್ರದೇಶದ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮ ಉದ್ದೇಶ. ಕ್ರೀಡೆ, ಸಂಸ್ಕೃತಿ ಮತ್ತು ಕೃಷಿ ಬದುಕನ್ನು ಒಂದೇ ವೇದಿಕೆಯಲ್ಲಿ ಸಂಯೋಜಿಸುವ ಮೂಲಕ ಅಕಾಡೆಮಿಯಿಂದ ಇದೇ ಮೊದಲ ಬಾರಿ ಕೆಸರು ಗದ್ದೆ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.) ಸುಳ್ಯದ ಕಾರ್ಯದರ್ಶಿ ಕೆ.ವಿ. ಹೇಮನಾಥ್ ಮಾತನಾಡಿ,
ನಗರೀಕರಣ ಹಾಗೂ ಆಧುನಿಕ ಜೀವನಶೈಲಿಯ ನಡುವೆ ಗದ್ದೆ, ಕೃಷಿ, ಮಣ್ಣು, ಮಳೆ ಮತ್ತು ಗ್ರಾಮೀಣ ಕ್ರೀಡೆಗಳೊಂದಿಗಿನ ನಂಟು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳು ಯುವಜನರಲ್ಲಿ ಗ್ರಾಮೀಣ ಸಂಸ್ಕೃತಿಯ ಬಗ್ಗೆ ಆಸಕ್ತಿ ಮೂಡಿಸಲು ಸಹಕಾರಿಯಾಗುತ್ತವೆ ಎಂದರು.

ನೆಹರು ಮೆಮೋರಿಯಲ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ, ನೆಹರು ಮೆಮೋರಿಯಲ್ ಕಾಲೇಜಿನ ಐ.ಕ್ಯೂ.ಎ.ಸಿ, ನೇಚರ್ ಕ್ಲಬ್, ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಸಂಘ, ಪ್ರತಾಪ ಯುವಕ ಮಂಡಲ (ರಿ.) ಅಜ್ಜಾವರ ಹಾಗೂ ಮೈತ್ರಿ ಯುವತಿ ಮಂಡಲ (ರಿ.) ಅಜ್ಜಾವರ ಇವರ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ವೇದಿಕೆಯಲ್ಲಿ ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಡಾ. ಕೆ.ಟಿ. ವಿಶ್ವನಾಥ್, ಉಪಾಧ್ಯಕ್ಷರಾದ ದೊಡ್ಡಣ್ಣ ಬರೆಮೇಲು, ಅರೆಭಾಷೆ ಅಕಾಡೆಮಿಯ ಸದಸ್ಯೆ ಚಂದ್ರಾವತಿ ಬಡ್ಡಡ್ಕ ಉಪಸ್ಥಿತರಿದ್ದರು.

ಈ ಸಂದರ್ಭ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಗದ್ದೆನ ಮಾಲೀಕರಾದ ಬಾಲಕೃಷ್ಣ ನಾಯ್ಕ್, ಪ್ರತಾಪ ಯುವಕ ಮಂಡಲ (ರಿ.), ಅಜ್ಜಾವರದ ಅಧ್ಯಕ್ಷರಾದ ಗುರುರಾಜ್, ಕಾಲೇಜಿನ ಶಿಕ್ಷಕ-ರಕ್ಷಕ ಸಂಘ ಹಾಗೂ ಚೈತ್ರ ಯುವತಿ ಮಂಡಲ (ರಿ.) ಅಜ್ಜಾವರದ ಅಧ್ಯಕ್ಷೆ ಶಶ್ಮಿ ಭಟ್ ಹಂಚಿನಮನೆ ಇವರನ್ನು ಕಾರ್ಯಕ್ರಮದ ಆಯೋಜನೆಯ ಸಹಕಾರಕ್ಕೆ ಗುರುತಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘ ಹಾಗೂ ನೇಚರ್ ಕ್ಲಬ್ ಸಂಚಾಲಕರಾದ ಕುಲದೀಪ್ ಪೆಲ್ತಡ್ಕ ಸ್ವಾಗತಿಸಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಕಾರ್ಯಕ್ರಮ ಸಂಚಾಲಕ ಡಾ. ಎನ್.ಎ ಜ್ಞಾನೇಶ್ ಪ್ರಸ್ತಾವಿಕ ಮಾತುಗಳನ್ನಾಡಿ, ಎನ್ನೆoಸಿ ಹಿರಿಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಮಧುರ ಎಂ ಆರ್ ವಂದಿಸಿದರು. ಕಾಲೇಜಿನ ವಿದ್ಯಾರ್ಥಿಗಳಾದ ಅಭಿಷೇಕ್ ಮತ್ತು ಕು. ಪ್ರಾರ್ಥನಾ ಪ್ರಾರ್ಥಿಸಿ, ಕು. ಶ್ರೇಯ ಕಾರ್ಯಕ್ರಮ ನಿರೂಪಿಸಿದರು. ಕೆವಿಜಿ ಮೆಡಿಕಲ್ ಕಾಲೇಜಿನ ಸಂಸ್ಕೃತಿಕ ನಿರ್ವಾಹಕ ಕಾರ್ತಿಕ್ ಕುಡೆಕಲ್ಲು ತೀರ್ಪುಗಾರರಾಗಿ ಸಹಕರಿಸಿದರು. ವಿನೀತ್ ಕೋಲ್ಚಾರ್ ವೀಕ್ಷಕ ವಿವರಣೆ ನೀಡಿದರು.

ಕೆಸರುಗದ್ದೆಯಲ್ಲಿ ವಿದ್ಯಾರ್ಥಿಗಳಿಗೆ ಕಂಬಳ ಓಟ, ಕೆಸರುಗದ್ದೆ ಓಟ, ವಾಲಿಬಾಲ್, ರಿಲೇ, ಹಗ್ಗಜಗ್ಗಾಟ, ರೀಲ್ಸ್ ತಯಾರಿ, ವೀಡಿಯೋಗ್ರಫಿ ಹೀಗೆ ವಿವಿಧ ಸಾಂಪ್ರದಾಯಿಕ ಮತ್ತು ಮನರಂಜನಾ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ ವೃಂದದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.