
ದಾವಣಗೆರೆ: ಅಕ್ರಮ ಸಂಬಂಧದ ಅಡ್ಡಿಯಾಗಿದ್ದಕ್ಕೆ ಪತ್ನಿಯೇ ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಲೆ ಮಾಡಿ, ಬಳಿಕ ಮೃತದೇಹವನ್ನು ತುಂಗಭದ್ರಾ ನದಿಗೆ ಬಿಸಾಕಿರುವ ಘಟನೆ ದಾವಣಗೆರೆ ತಾಲೂಕಿನ ಪಾಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪಾಮೇನಹಳ್ಳಿ ಗ್ರಾಮದ ರಘು (36) ಕೊಲೆಯಾದ ದುರ್ದೈವಿ. ಆತನ ಪತ್ನಿ ಶೃತಿ ಹಾಗೂ ಆಕೆಯ ಪ್ರಿಯಕರ ಉಬೇದುಲ್ಲಾ ಕೊಲೆ ಆರೋಪಿಗಳು.
ರಘು ಹಾಗೂ ಶೃತಿ ಕಳೆದ 12 ವರ್ಷಗಳ ಹಿಂದೆ ಮದುವೆಯಾಗಿದ್ದರು. ರಘುವಿನ ಕುಡಿತದ ಚಟದಿಂದ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಅಷ್ಟೇ ಅಲ್ಲ ಕಳೆದ 2-3 ವರ್ಷಗಳಿಂದ ಶೃತಿ ಹಾಗೂ ಉಬೇದುಲ್ಲಾ ನಡುವೆ ಅಕ್ರಮ ಸಂಬಂಧವಿತ್ತು.
ಈ ಸಂಬಂಧದಿಂದಾಗಿ ಶೃತಿಗೆ ಪತಿಯೊಂದಿಗೆ ಸಂಸಾರ ನಡೆಸಲು ಕಿರಿಕಿರಿ ಆಗುತ್ತಿತ್ತು. ಹೀಗಾಗಿ ಪ್ರಿಯಕರ ಉಬೇದುಲ್ಲಾ ಜೊತೆ ಸೇರಿ ರಘುವನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಕೊಲೆ ಬಳಿಕ ಉಬೇದುಲ್ಲಾ ಹಾಗೂ ಆತನ ಸ್ನೇಹಿತ ಸುರೇಶ್ ಸೇರಿಕೊಂಡು ರಘುವಿನ ಮೃತದೇಹವನ್ನು ತುಂಗಭದ್ರಾ ನದಿಗೆ ಬಿಸಾಕಿದ್ದಾರೆ.
ಇತ್ತ ರಘು ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ವೇಳೆ ಶೃತಿಯ ಸಹೋದರಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ ಹಲವು ಅನುಮಾನಗಳು ಮೂಡಿವೆ. ಬಳಿಕ ವಿಚಾರಣೆ ತೀವ್ರಗೊಳಿಸಿದಾಗ ಪ್ರಕರಣದ ಸತ್ಯ ಹೊರಬಂದಿದೆ.
ಸದ್ಯ ರಘುವಿನ ಕೊಲೆ ಹಾಗೂ ಮೃತದೇಹ ಸಾಗಿಸಿದ ಆರೋಪದಲ್ಲಿ ಶೃತಿ, ಉಬೇದುಲ್ಲಾ ಹಾಗೂ ಸುರೇಶ್ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮೃತದೇಹಕ್ಕಾಗಿ ತುಂಗಭದ್ರಾ ನದಿಯಲ್ಲಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಸಂಬಂಧ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ










