Saturday, August 15, 2026
ಸುದ್ದಿ

ಮಂಗಳೂರು ದಕ್ಕೆಯಲ್ಲಿ ಗರಿಗೆದರಿದ ಮೀನುಗಾರಿಕೆ: ಕಡಲಿನಿಂದ ದಡಕ್ಕೆ ಮರಳಿದ ಆಳಸಮುದ್ರ ಬೋಟ್‌ಗಳು, ರಾಶಿ ರಾಶಿ ಮೀನು-ಕಹಳೆ ನ್ಯೂಸ್

ಮಂಗಳೂರು: ಕರಾವಳಿಯಲ್ಲಿ ಮಳೆಗಾಲದ 61 ದಿನಗಳ ಕಾಲಾವಧಿಯ ಆಳಸಮುದ್ರ ಮೀನುಗಾರಿಕಾ ನಿಷೇಧ (ರಜಾ ಅವಧಿ) ಮುಕ್ತಾಯಗೊಂಡ ಬೆನ್ನಲ್ಲೇ, ಮಂಗಳೂರಿನ ಹಳೆ ಬಂದರಿನಲ್ಲಿ (ದಕ್ಕೆ) ಮೀನುಗಾರಿಕಾ ಚಟುವಟಿಕೆಗಳು ಮತ್ತೆ ಕಳೆಗಟ್ಟಿವೆ. ಆಳ ಸಮುದ್ರಕ್ಕೆ ಇಳಿದಿದ್ದ ಟ್ರಾಲ್‌ಬೋಟ್‌ಗಳು ಅಪಾರ ಪ್ರಮಾಣದ ವೈವಿಧ್ಯಮಯ ಮೀನುಗಳ ರಾಶಿಯೊಂದಿಗೆ ಬಂದರಿಗೆ ಮರಳುತ್ತಿದ್ದು, ಮೀನು ವ್ಯಾಪಾರಿಗಳು, ಕಾರ್ಮಿಕರು ಹಾಗೂ ಗ್ರಾಹಕರಿಂದ ದಕ್ಕೆ ಪ್ರದೇಶ ಜನಜಂಗುಳಿಯಿಂದ ಗಿಜಿಗುಡುತ್ತಿದೆ.

ಜಾಹೀರಾತು

ವಾಡಿಕೆಯಂತೆ ಆಗಸ್ಟ್ 1 ರಿಂದಲೇ ಹೊಸ ಮೀನುಗಾರಿಕಾ ಋತು ಆರಂಭವಾಗಿದ್ದರೂ, ಆರಂಭದ 4-5 ದಿನಗಳ ಕಾಲ ಸಮುದ್ರದಲ್ಲಿ ಗಾಳಿ, ಮಳೆಯ ತೀವ್ರತೆ ಹಾಗೂ ಕಡಲ ಅಲೆಗಳ ಅಬ್ಬರ ಹೆಚ್ಚಾಗಿದ್ದ ಕಾರಣ ಮೀನುಗಾರರು ಕಡಲಿಗೆ ಇಳಿಯಲು ಸಾಧ್ಯವಾಗಿರಲಿಲ್ಲ. ಹವಾಮಾನ ಸುಧಾರಿಸುತ್ತಿದ್ದಂತೆಯೇ ಮಂಗಳೂರು ದಕ್ಕೆಯಿಂದ ಸುಮಾರು ಶೇ. 70 ರಿಂದ 80 ರಷ್ಟು ಆಳ ಸಮುದ್ರ ಟ್ರಾಲ್‌ಬೋಟ್‌ಗಳು ಮೀನುಗಾರಿಕೆಗೆ ತೆರಳಿದ್ದವು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ದಕ್ಕೆಯಲ್ಲಿ ಗರಿಗೆದರಿದ ಮೀನುಗಾರಿಕೆ ಇದೀಗ 8 ರಿಂದ 10 ದಿನಗಳ ಕಾಲ ಕಡಲಲ್ಲಿದ್ದು ಮೀನುಗಾರಿಕೆ ನಡೆಸಿದ ಬೋಟ್‌ಗಳು ಒಂದೊಂದಾಗಿ ಬಂದರಿಗೆ ಲಂಗರು ಹಾಕುತ್ತಿದ್ದು, ಎಲ್ಲ ಬೋಟ್‌ಗಳಲ್ಲೂ ಉತ್ತಮ ಪ್ರಮಾಣದ ಮೀನುಗಳು ಲಭ್ಯವಾಗಿವೆ. ಬಂದರಿನಲ್ಲಿ ಬಗೆಬಗೆಯ ಮೀನುಗಳ ರಾಶಿ: ದಕ್ಕೆಗೆ ಆಗಮಿಸಿರುವ ಬೋಟ್‌ಗಳಿಂದ ಬಗೆಬಗೆಯ ತಾಜಾ ಮೀನುಗಳನ್ನು ಖಾಲಿ ಮಾಡುವ, ಬುಟ್ಟಿಗಳಿಗೆ ತುಂಬುವ ಹಾಗೂ ಬಾಕ್ಸ್‌ಗಳಲ್ಲಿ ಐಸ್ ಹಾಕಿ ಪ್ಯಾಕ್ ಮಾಡುವ ದೃಶ್ಯಗಳು ಕಾಣುತ್ತಿವೆ.

ಮದ್ಮಾಲ್ ಮೀನು, ಬೊಂಡಾಸ್ ಹಾಗೂ ಕಪ್ಪೆ ಬೊಂಡಾಸ್ (ಸ್ಕ್ವಿಡ್/ಕಟ್ಲ್‌ಫಿಶ್), ಬಂಗುಡೆ, ಅಂಜಲ್, ಪಾಪ್ಲೇಟ್/ ಮಾಂಜಿ, ಸಿಗಡಿ, ಮುರು ಮೀನು, ಡಿಸ್ಕೋ ಸೇರಿದಂತೆ ಹಲವು ತಳಿಯ ಮೀನುಗಳು ಬಂದರಿಗೆ ರಾಶಿ ರಾಶಿಯಾಗಿ ಬಂದಿಳಿದಿವೆ.
ಕಳೆದ ಎರಡು ತಿಂಗಳುಗಳಿಂದ ತಾಜಾ ಮೀನಿನ ಕೊರತೆ ಅನುಭವಿಸುತ್ತಿದ್ದ ಕರಾವಳಿಯ ಮೀನುಪ್ರಿಯರು ಬಂದರಿಗೆ ಲಗ್ಗೆಯಿಡುತ್ತಿದ್ದು, ವ್ಯಾಪಾರ-ವಹಿವಾಟು ಭರ್ಜರಿಯಾಗಿ ಸಾಗುತ್ತಿದೆ.

ರಜೆಯ ಬಳಿಕ ಮೀನುಗಾರಿಕೆ ಮರಳಿ ಗರಿಗೆದರಿರುವುದರಿಂದ ಕೇವಲ ಮೀನುಗಾರರಷ್ಟೇ ಅಲ್ಲದೆ, ಮೀನು ಸಾಗಾಟ ಲಾರಿ ಚಾಲಕರು, ಐಸ್ ಪ್ಲಾಂಟ್ ಕಾರ್ಮಿಕರು, ಬುಟ್ಟಿ ಹೊರುವ ಕಾರ್ಮಿಕರು ಹಾಗೂ ಸ್ಥಳೀಯ ಮಹಿಳಾ ಮೀನು ವ್ಯಾಪಾರಿಗಳ ಮುಖದಲ್ಲೂ ಮಂದಹಾಸ ಮೂಡಿದ್ದು, ಕರಾವಳಿಯ ಆರ್ಥಿಕತೆಗೆ ನವಚೈತನ್ಯ ತಂದಿದೆ.