ಗಲ್ಫ್ ಉದ್ಯೋಗಕ್ಕಿಂತ ಭಾರತೀಯ ಸೇನೆಯೇ ಉತ್ತಮ : ನೇಪಾಳದಲ್ಲಿ ನೇಮಕಾತಿ ಪುನರಾರಂಭಿಸುವಂತೆ ಬೃಹತ್ ಪ್ರತಿಭಟನೆ – ಕಹಳೆ ನ್ಯೂಸ್

ನವದೆಹಲಿ: ಭಾರತೀಯ ಸೇನೆಯಲ್ಲಿ ನೇಪಾಳಿ ಯುವಕರ ನೇಮಕಾತಿಯನ್ನು ಅಗ್ನಿಪಥ್ ಯೋಜನೆಯಡಿಯಲ್ಲಿ ತಕ್ಷಣವೇ ಪುನರಾರಂಭಿಸಬೇಕು ಎಂದು ಆಗ್ರಹಿಸಿ ನೇಪಾಳದ ಪೋಖರಾ ನಗರದಲ್ಲಿ ಮಾಜಿ ಗೂರ್ಖಾ ಸೈನಿಕರು Sಹಾಗೂ ಅವರ ಬೆಂಬಲಿಗರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ನೇಪಾಳಿ ಪೋರ್ಟಲ್ ‘ರಾಟೋಪಾಟಿ’ ವರದಿಯ ಪ್ರಕಾರ, ಪ್ರತಿಭಟನೆಯು ಬುಧವಾರ (ಆಗಸ್ಟ್ 12) ನಡೆದಿದ್ದು, ‘ಇಂಡಿಯನ್ ಎಕ್ಸ್-ಸರ್ವೀಸ್‌ಮೆನ್ ಗೂರ್ಖಾ ಬ್ರಿಗೇಡ್ ನೇಪಾಳ ಪೋಖರಾ’ ಈ ಪ್ರತಿಭಟನೆಯನ್ನು ಆಯೋಜಿಸಿತ್ತು. ಭಾರತದ ಸೇನಾ ಮುಖ್ಯಸ್ಥ ಜನರಲ್ ಧೀರಜ್ ಸೇಥ್ ಅವರ ನೇಪಾಳ ಪ್ರವಾಸದ ಮುನ್ನಾದಿನಗಳಲ್ಲೇ ಈ ಪ್ರತಿಭಟನೆ ನಡೆದಿರುವುದು ವಿಶೇಷ.
ಭಾರತೀಯ ಸೇನೆಗೆ ನೇಪಾಳಿ ಯುವಕರ ನೇಮಕಾತಿಯನ್ನು ತಕ್ಷಣವೇ ಪುನರಾರಂಭಿಸುವುದು. ತಮ್ಮ ಹೆಸರಿನಲ್ಲಿ ಸೈನಿಕ (Soldier) ಎಂಬ ಪದವನ್ನು ಬಳಸುವ ಮಾಜಿ ಸೈನಿಕರ ಸಂಸ್ಥೆಗಳನ್ನು ನವೀಕರಿಸಬೇಕೆಂದು ನೇಪಾಳ ಸರ್ಕಾರಕ್ಕೆ ಬೇಡಿಕೆ ಇರಿಸಿದೆ. ತಮ್ಮ ಬೇಡಿಕೆಗಳನ್ನು ತಕ್ಷಣ ಈಡೇರಿಸದಿದ್ದರೆ ಮುಂಬರುವ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬ್ರಿಗೇಡ್ ಅಧ್ಯಕ್ಷ ಕರ್ನಲ್ ಕೃಷ್ಣ ಬಹದ್ದೂರ್ ಖತ್ರಿ ಪ್ರತಿಕ್ರಿಯಿಸಿ, ಸುಗೌಲಿ ಒಪ್ಪಂದದ (Sugauli Treaty) ನಂತರ ಕಳೆದ 207 ವರ್ಷಗಳಿಂದ ಭಾರತೀಯ ಸೇನೆಗೆ ನೇಪಾಳಿ ಯುವಕರ ನೇಮಕಾತಿ ನಿರಂತರವಾಗಿ ನಡೆಯುತ್ತಿತ್ತು. ಆದರೆ ಅಗ್ನಿಪಥ್ ಯೋಜನೆ ಜಾರಿಗೆ ಬಂದ ನಂತರ ಸರ್ಕಾರ ನಾನಾ ಕಾರಣಗಳನ್ನು ನೀಡಿ ನೇಪಾಳಿ ಯುವಕರು ಭಾರತೀಯ ಸೇನೆಗೆ ಸೇರುವುದನ್ನು ತಡೆದಿದೆ. ಇದರಿಂದಾಗಿ ಎರಡು ಶತಮಾನಗಳ ಚಾರಿತ್ರಿಕ ಬಾಂಧವ್ಯ ಅಪಾಯದಲ್ಲಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.











