100% ಪರಿಶುದ್ಧ ಎಂದು ಜೇನು, ಹಸುವಿನ ತುಪ್ಪ, ತೆಂಗಿನ ಎಣ್ಣೆ ಮಾರಾಟಕ್ಕೆ ಡಾಬರ್ ಕಂಪನಿಗೆ ನಿರ್ಬಂಧ ಹೇರಿದ FSSAI – ಕಹಳೆ ನ್ಯೂಸ್

ನವದೆಹಲಿ: 100% ಪರಿಶುದ್ಧ ಎಂದು ಜೇನು, ದನದ ತುಪ್ಪ, ತೆಂಗಿನ ಎಣ್ಣೆ ಮಾರಾಟಕ್ಕೆ ಡಾಬರ್ ಕಂಪನಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI ) ನಿರ್ಬಂಧ ಹೇರಿದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಪ್ರಮುಖ ಗ್ರಾಹಕ ಉತ್ಪನ್ನಗಳ ತಯಾರಕ ಸಂಸ್ಥೆಯಾದ ಡಾಬರ್ ಇಂಡಿಯಾ ಕಂಪನಿಗೆ ಎಚ್ಚರಿಕೆ ನೀಡಿದೆ. ಉತ್ಪನ್ನಗಳ ಮೇಲೆ 100% ಶುದ್ಧ ಎಂದು ಮಾರಾಟ ಮಾಡುವುದು ಹಾಗೂ ಇಂತಹ ಜಾಹೀರಾತು ಮತ್ತು ಲೇಬಲ್‌ಗಳನ್ನು ಬಳಸುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ತಿಳಿಸಿ, ಮಾರಾಟಕ್ಕೆ ನಿಷೇಧ ಹೇರಿದೆ.
ಡಾಬರ್ ಇಂಡಿಯಾ ಕಂಪನಿಯು ತನ್ನ ಉತ್ಪನ್ನಗಳಾದ ಜೇನುತುಪ್ಪ, ಆಪಲ್ ಸೈಡರ್ ವಿನೆಗರ್, ತೆಂಗಿನ ಎಣ್ಣೆ, ಎಳ್ಳೆಣ್ಣೆ, ಹಸುವಿನ ತುಪ್ಪ, ತೆಂಗಿನ ನೀರು, ತೆಂಗಿನ ಹಾಲು ಮತ್ತು ಇತರ ಸಮಾನ ಉತ್ಪನ್ನಗಳ ಮೇಲೆ `100 ಪ್ರತಿಶತ ನ್ಯಾಚುರಲ್’, `100 ಪ್ರತಿಶತ ಪ್ಯೂರ್’, `100 ಪ್ರತಿಶತ ಪ್ಯೂರಿಟಿ ಗ್ಯಾರಂಟೀಡ್’, `100 ಪ್ರತಿಶತ ಆರ್ಗ್ಯಾನಿಕ್’ ಮತ್ತು `100 ಪ್ರತಿಶತ ಟೆಂಡರ್ ಕೋಕೊನಟ್ ವಾಟರ್’ ಎಂಬ ದಾರಿ ತಪ್ಪಿಸುವ ಹಕ್ಕುಗಳನ್ನು ಬಳಕೆ ಮಾಡಿರುವುದು ಕಂಡುಬಂದಿದೆ.











