Sunday, July 12, 2026
ಸುದ್ದಿ

ವಾದಿರಾಜರ ಅವತಾರ ಭೂಮಿಯಲ್ಲಿ ಭತ್ತನಾಟಿ ಮಾಡಿದ ಜಗದ್ಗುರು ಸೋದೆ ಶ್ರೀಪಾದರು – ಕಹಳೆ ನ್ಯೂಸ್

“ಪಾರಂಪರಿಕ ಭತ್ತದ ತಳಿಗಳು ಕಾಣೆಯಾಗುತ್ತಿರುವ ಈ ಕಾಲದಲ್ಲಿ ಅದನ್ನು ಉಳಿಸಿ ಬೆಳೆಸುವಲ್ಲಿ ತೊಡಗಿರುವ ಕೃಷಿ ಪ್ರಯೋಗ ಪರಿವಾರದ ಕಾರ್ಯ ಅಭಿನಂದನೀಯ.

ಔಷಧವಾಗಬೇಕಾದ ಆಹಾರ ಇಂದು ಔಷಧವೇ ಆಹಾರವಾಗಬೇಕಾದ ಸನ್ನಿವೇಶ ಎದುರಾಗಿದೆ. ಇದಕ್ಕೆ ಪರಿಹಾರವೆಂದರೆ ರಾಸಾಯನಿಕ ರಹಿತ ವಿಷಮುಕ್ತ ಅನ್ನ ಬೆಳೆಯುವುದು.” ಹೀಗೆಂದು ಸಾವಯವ ಕೃಷಿ ಪದ್ಧತಿಯ ಮಹತ್ತ್ವ ಸಾರುದವರು ಜಗದ್ಗುರು ಶ್ರೀಮನ್‌ ಮಧ್ವಾಚಾರ್ಯ ಸಂಸ್ಥಾನ ಸೋದೆ ಶ್ರೀಪಾದರಾದ ಶ್ರೀ ವಿಶ್ವವಲ್ಲಭತೀರ್ಥರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ತಳಿ ಸಂರಕ್ಷಣಾ ಅಭಿಯಾನದ ಮೂಲಕ ಅನ್ನಬ್ರಹ್ಮ ಉಡುಪಿ ಶ್ರೀಕೃಷ್ಣನಿಗೆ ಶುದ್ಧನೈವೇದ್ಯ ಸಮರ್ಪಣಾ ನಿಮಿತ್ತ ಕೃಷಿ ಕಾಳಜಿಯ ವಾದಿರಾಜ ಗುರುಸಾರ್ವಭೌಮರ ಅವತಾರಭೂಮಿ ಹೂವಿನಕೆರೆ ಗೌರಿಗದ್ದೆಯಲ್ಲಿ ಪಾರಂಪರಿಕ ಭತ್ತದ ಸಸಿಯನ್ನು ನೆಟ್ಟು ಆಶೀರ್ವಚನ ನೀಡುತ್ತಿದ್ದರು.

ಹೂವಿನಕೆರೆಯಲ್ಲಿ ಶ್ರೀ ವಾದಿರಾಜರ ಮೂಲಮನೆಯಿಂದ ಪಾದಯಾತ್ರೆಯ ಮೂಲಕ ಗೌರಿಗದ್ದೆಗೆ ಬಂದು ಸಸಿ ನೆಡುವ ಮೂಲಕ ತಳಿ ಸಂರಕ್ಷಣಾ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು ಅರ್ಥಪೂರ್ಣವಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ದಕ್ಷಿಣ ಭಾರತದಲ್ಲೇ ಮೊದಲೆನಿಸಿದ ನಿತ್ಯ ಒಂದೊಂದು ತಳಿ ಶುದ್ಧ ನೈವೇದ್ಯ ಅನ್ನಬ್ರಹ್ಮನಿಗೆ ಸಮರ್ಪಿಸುವ ಯೋಜನೆಯ ರೂವಾರಿ ಹಾದಿಗಲ್ಲು ಅಭಯಲಕ್ಷ್ಮೀನೃಸಿಂಹ ದೇಗುಲದ ಧರ್ಮದರ್ಶಿ, ಸಂಸ್ಕೃತಿ ಚಿಂತಕ ಹಾದಿಗಲ್ಲು ಲಕ್ಷ್ಮೀನಾರಾಯಣ ಅವರು ರೈತರ ಕೈ ಬಲಪಡಿಸಲು ಬೆಳೆವ ಭೂಮಿ ಇಲ್ಲದವರೂ ಸಹ ಆರ್ಥಿಕ ನೆರವಿನ ಪ್ರಾಯೋಜನೆಯ ಮೂಲಕ ಪರೋಕ್ಷ ರೈತರಾಗಿ ಈ ಅಭಿಯಾನದಲ್ಲಿ ಪಾಲ್ಗೊಳ್ಳಬಹುದೆಂದರು. ಕೃಷಿ ಋಷಿ ಪುರುಷೋತ್ತಮರಾಯರು ಸಾವಯವ ಕೃಷಿ ಪಸರಿಸಿದ ಬಗೆ ಮತ್ತು  ಪಾರಂಪರಿಕ ಬೀಜತಳಿ ಸಂರಕ್ಷಣೆಗಾಗಿ ಕೃಷಿ ಪ್ರಯೋಗ ಪರಿವಾರ ಹಮ್ಮಿಕೊಂಡ ಕಾರ್ಯಚಟುವಟಿಕೆ ವಿವರಿಸಿದವರು ವಿಶ್ವಸ್ತರಾದ ಚಕ್ಕೋಡಬೈಲು ಶ್ರೀವತ್ಸ.

ಪರಿವಾರದ ಪೂರ್ಣಾವಧಿ ಕಾರ್ಯಕರ್ತ ಕೃಷಿ ಪದವಿಧರ ಅರುಣ, ವ್ಯವಸ್ಥಾಪಕ ನಿರ್ದೇಶಕ ಸರು ದಿನೇಶ, ನಿರ್ದೇಶಕ ಕಾರ್ಕಳದ ಶ್ರೀನಿವಾಸ ಭಟ್, ಸಾಮಾಜಿಕ ಕಾರ್ಯಕರ್ತ ಶ್ಯಾಮಸುಂದರ, ಹೂವಿನಕೆರೆ ಮಠದ ಆಡಳಿತ ಸಮಿತಿಯ ಚಂದ್ರಮೋಹನ ಧನ್ಯ, ಕೋಟೇಶ್ವರ ರಮೇಶ್‌ ಹತ್ವಾ ಸೇರಿದಂತೆ ಹಲವು ರೈತರು ಪಾಲ್ಗೊಂಡ ಈ ಕಾರ್ಯಕ್ರಮದಲ್ಲಿ  ತಲಾ ಎರಡು ಎಕರೆ ಗದ್ದೆ ಕೃಷಿಯ ಪ್ರಾಯೋಜಕರಾಗಿ ಶ್ರೀ ಉದಯಶೇಟ್‌ ಮತ್ತು ಶ್ರೀ ಸೂರ್ಯನಾರಾಯಣ ಅಡಿಗ ಅವರು ಗುರುಗಳಿಂದ ಆಶೀರ್ವಾದ ಪಡೆದದ್ದು ಸಾವಯವ ಕೃಷಿಕರ ಹುಮ್ಮಸ್ಸನ್ನು ಹೆಚ್ಚಿಸಿತ್ತು.