ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 3 ತಿಂಗಳ ಉಚಿತ ಟೈಲರಿಂಗ್ ಕ್ಲಾಸ್ ಆರಂಭ-ಕಹಳೆ ನ್ಯೂಸ್

ಕಾಪು *ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಕಾಪು ತಾಲೂಕು, ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಉಚ್ಚಿಲ ವಲಯದ ಮಜೂರು ಕಾರ್ಯಕ್ಷೇತ್ರದಲ್ಲಿ 3 ತಿಂಗಳ ಉಚಿತ ಟೈಲರಿಂಗ್ ಕ್ಲಾಸನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ಯಶಸ್ವಿಯಾಗಿ ನೆರವೇರಿತು*.
*ಕಾರ್ಯಕ್ರಮದ ಉದ್ಘಾಟನೆಯನ್ನು ಜನಜಾಗ್ರತಿ ವೇದಿಕೆಯ ಸದಸ್ಯರಾದ ಫಾರೂಕ್ ಸರ್ ಅವರು ನೆರವೇರಿಸಿದರು. ಬಳಿಕ ಮಾತನಾಡಿದ ಅವರು, “ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸದಾ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಶ್ರೀ ಕ್ಷೇತ್ರದ ಪೂಜ್ಯ ಖಾವಂದರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಜನರ ಏಳಿಗೆಯ ಬಗ್ಗೆ ಇರುವ ದೂರದೃಷ್ಟಿಯಿಂದಾಗಿ ಇಂದು ಲಕ್ಷಾಂತರ ಜನರು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಪ್ರಸ್ತುತ ಮಜೂರು ಪರಿಸರದಲ್ಲಿ 3 ತಿಂಗಳ ಕಾಲ ಉಚಿತವಾಗಿ ಟೈಲರಿಂಗ್ ತರಬೇತಿ ನೀಡುತ್ತಿರುವುದು ಸ್ಥಳೀಯ ಮಹಿಳೆಯರ ಭಾಗ್ಯವಾಗಿದೆ. ಇದರ ಸಂಪೂರ್ಣ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸಬೇಕು,” ಎಂದು ಕರೆ ನೀಡಿದರು*
*ಮಜೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಸಹನಾ ತಂತ್ರೀ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶುಭ ಹಾರೈಸಿದರು*
*ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಬ್ದುಲ್ ರಜಾಕ್, ಟೈಲರಿಂಗ್ ಶಿಕ್ಷಕಿ ಜ್ಯೋತಿ, ಉಚ್ಚಿಲ ವಲಯದ ಮೇಲ್ವಿಚಾರಕಿ ವಿನುತಾ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸವಿತಾ ಹಾಗೂ ಸೇವಾ ಪ್ರತಿನಿಧಿ ರಜನಿ ಉಪಸ್ಥಿತರಿದ್ದರು. ಸ್ಥಳೀಯ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಮತ್ತು ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು*.











