
ನವದೆಹಲಿ: ಲೋಹಗಢ ಕೋಟೆಯಿಂದ ತಳ್ಳಿ ಕೊಂದಿದ್ದ ಕೇತನ್ ಅಗರ್ವಾಲ್ ಸಾವನ್ನು ಅಪಹಾಸ್ಯ ಮಾಡಿದ್ದ ದಂತ ವೈದ್ಯೆಯನ್ನು ಅಖಿಲ ಭಾರತ ದಂತ ವೈದ್ಯಕೀಯ ವಿದ್ಯಾರ್ಥಿಗಳ ಮತ್ತು ಶಸ್ತ್ರಚಿಕಿತ್ಸಕರ ಸಂಘಐದು ವರ್ಷಗಳ ಕಾಲ ಅಮಾನತು ಮಾಡಿದೆ.
ಅಮಾನತು ಆದೇಶದ ಪ್ರಕಾರ, ಮಧ್ಯಪ್ರದೇಶದ ಎಐಡಿಎಸ್‌ಎ ಸಂಘಟನೆಯ ಖಜಾಂಚಿಯಾಗಿದ್ದ ಡಾ.ಮುಸ್ಕಾನ್ ಸೋನಿ (Dr. Muskan Soni) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಐದು ವರ್ಷಗಳ ಅವಧಿಗೆ ಅಮಾನತುಗೊಳಿಸಲಾಗಿದೆ. ಇತ್ತೀಚಿಗೆ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಜೂ.18ರಂದು ಲೋಹಗಢ್ ಕೋಟೆಯಲ್ಲಿ ಕೊಲೆಯಾದ ಕೇತನ್ ಅಗರ್ವಾಲ್ ಸಾವಿನ ಕುರಿತು ಅಪಹಾಸ್ಯ ಮಾಡಿದ್ದರು. ಇದರ ಬೆನ್ನಲ್ಲೇ ಕ್ರಮ ಕೈಗೊಂಡಿದ್ದು, ಅತ್ಯಂತ ಅಸಭ್ಯ, ಆಕ್ಷೇಪಾರ್ಹ ಮತ್ತು ಅಗೌರವ ಸೂಚಿಸುವ ಮಾತುಗಳನ್ನಾಡಿದ್ದಾರೆ. ಇದು ಸಂಘಟನೆಯ ನಿಯಮ ಮತ್ತು ನೈತಿಕ ಮೌಲ್ಯಗಳ ಉಲ್ಲಂಘನೆ ಎಂದು ಸಂಸ್ಥೆ ತಿಳಿಸಿದೆ.
ಮುಸ್ಕಾನ್ ಮುಂದಿನ ಐದು ವರ್ಷಗಳ ಕಾಲ ಸಂಘಟನೆಯ ಯಾವುದೇ ಹುದ್ದೆ, ಜವಾಬ್ದಾರಿ, ಸಮಿತಿ ಅಥವಾ ಸದಸ್ಯತ್ವ ಹೊಂದಲು ಅರ್ಹರಾಗಿರುವುದಿಲ್ಲ. ಅಲ್ಲದೆ, ಯಾವುದೇ ಅಧಿಕೃತ ಚಟುವಟಿಕೆಗಳಲ್ಲಿ ಭಾಗವಹಿಸಲು ಅಥವಾ ಪ್ರತಿನಿಧಿಸಲು ಅವರಿಗೆ ಅವಕಾಶವಿರುವುದಿಲ್ಲ ಎಂದಿದೆ.
ಇನ್ನು ಕೇತನ್ ಅಗರ್ವಾಲ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅವರ ನಿಶ್ಚಿತ ವಧು ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಎನ್ನಲಾದ ಚೇತನ್ ಚೌಧರಿ ಅನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಏನಿದು ಕೇತನ್ ಅಗರ್ವಾಲ್ ಪ್ರಕರಣ?
ಪೊಲೀಸರ ತನಿಖೆಯ ಪ್ರಕಾರ, ಜೂನ್ 18ರ ಬೆಳಗ್ಗೆ ಕೇತನ್ ಹಾಗೂ ಸಿಯಾ ಲೋಹಗಢ್ ಕೋಟೆಗೆ (Lohaghad Fort) ತೆರಳಿದ್ದರು. ಆ ದಿನ ಬೆಳಗ್ಗೆ 10.45ಕ್ಕೆ ಸಿಯಾ, ಕೇತನ್ ತಾಯಿಗೆ ಫೋನ್ ಮಾಡಿ ಆತ ಆಕಸ್ಮಿಕವಾಗಿ ಕೋಟೆಯ ಮೇಲಿಂದ ಬಿದ್ದಿದ್ದಾನೆ ಎಂದು ಸುಳ್ಳು ಹೇಳಿದ್ದಳು. ಆರಂಭದಲ್ಲಿ ಇದನ್ನು ಅಪಘಾತ ಎಂದು ಭಾವಿಸಲಾಗಿದ್ದರೂ, ಕೇತನ್ ಕುಟುಂಬದವರಿಗೆ ಅನುಮಾನ ಬಂದು ಪೊಲೀಸ್ ದೂರು ನೀಡಿದಾಗ ಅಸಲಿ ಸತ್ಯ ಹೊರಬಂದಿದೆ.
ಸಿಯಾ ಮತ್ತು ಆಕೆಯ ಪ್ರಿಯಕರ ಚೇತನ್ ಸೇರಿ ಈ ಕೊಲೆಗೆ ಬಹಳ ದಿನಗಳಿಂದ ಸಂಚು ರೂಪಿಸಿದ್ದರು ಹಾಗೂ ಇದಕ್ಕೂ ನಾಲ್ಕು ದಿನಗಳ ಮುಂಚೆಯೂ ಸಿಯಾ ಅದೇ ಕೋಟೆಯಲ್ಲಿ ಕೇತನ್‌ನನ್ನು ಇದೇ ರೀತಿ ತಳ್ಳಿ ಕೊಲ್ಲಲು ಪ್ರಯತ್ನಿಸಿದ್ದಳು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.











