ಶೀಘ್ರದಲ್ಲೇ ಜೋಗ್ ಫಾಲ್ಸ್‌ನಲ್ಲಿ ‘ರೋಪ್ ವೇ – ಕೇಬಲ್ ಕಾರ್’ ಸಂಚಾರ: ಸಾಗರ ತಹಶೀಲ್ದಾರ್ ಡಾ. ಪ್ರತಿಭಾ ನೇತೃತ್ವದಲ್ಲಿ ಸರ್ವೆ ಚುರುಕು – ಕಹಳೆ ನ್ಯೂಸ್

ಶಾಸಕರ ಸೂಚನೆ ಹಾಗೂ ಪ್ರಾಧಿಕಾರದ ನಡೆ:
ಜೋಗ್ ನಿರ್ವಹಣಾ ಪ್ರಾಧಿಕಾರದ ವತಿಯಿಂದ ಜೋಗ್ ಫಾಲ್ಸ್ ಅಭಿವೃದ್ಧಿಗೆ ಈಗಾಗಲೇ ಕೋಟ್ಯಂತರ ರೂಪಾಯಿ ವೆಚ್ಚದ ಕಾಮಗಾರಿಗಳು ನಡೆಯುತ್ತಿವೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಶಾಸಕ ಗೋಪಾಕೃಷ್ಣ ಬೇಳೂರು ಅವರು ಪ್ರವಾಸೋದ್ಯಮ ಆಕರ್ಷಣೆಯ ಎಲ್ಲಾ ಕಾರ್ಯಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಯೋಜನೆಗೆ ಮತ್ತಷ್ಟು ವೇಗ ಸಿಕ್ಕಿದೆ.
ಸಾಗರ ತಹಶೀಲ್ದಾರ್ ಡಾ. ಪ್ರತಿಭಾ ಆರ್ ಅವರ ಹೇಳಿದ್ದೇನು?
ನಮ್ಮ ಸಾಗರ ತಾಲೂಕು ಅತ್ಯುತ್ತಮ ಪ್ರವಾಸಿ ತಾಣವಾಗಿ ರೂಪುಗೊಳ್ಳಬೇಕು ಎನ್ನುವುದು ನಮ್ಮ ಆಶಯ. ಆ ನಿಟ್ಟಿನಲ್ಲಿ ನಮ್ಮ ತಾಲೂಕಿನ ಹೆಮ್ಮೆಯಾದ ಜೋಗ್ ಫಾಲ್ಸ್‌ನಲ್ಲಿ ಜೋಗ್ ನಿರ್ವಹಣಾ ಪ್ರಾಧಿಕಾರದ ವತಿಯಿಂದ ‘ರೋಪ್ ವೇ ಕೇಬಲ್ ಕಾರ್’ ನಿರ್ಮಾಣಕ್ಕಾಗಿ ಸಿದ್ಧತೆಗಳು ನಡೆದಿವೆ. ಯೋಜನೆಗೆ ಸಂಬಂಧಿಸಿದಂತೆ ಜಾಗ ಗುರುತಿಸುವ ಸರ್ವೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ಸದ್ಯದಲ್ಲಿಯೇ ಕೇಬಲ್ ಕಾರ್ ನಿರ್ಮಾಣದ ಪ್ರಾಯೋಗಿಕ ಕಾರ್ಯಗಳು ಪ್ರಾರಂಭವಾಗಲಿವೆ ಎಂದಿದ್ದಾರೆ.
ಸರ್ವೆ ಸಂದರ್ಭದಲ್ಲಿ ಉಪಸ್ಥಿತರಿದ್ದವರು:
ಜಾಗ ಗುರುತಿಸುವಿಕೆ ಹಾಗೂ ತಾಂತ್ರಿಕ ಪರಿಶೀಲನೆಯ ಈ ಸರ್ವೆ ಕಾರ್ಯದ ಸಂದರ್ಭದಲ್ಲಿ ತಹಶೀಲ್ದಾರ್ ಅವರೊಂದಿಗೆ ಸರ್ವೆಯರ್ ಹನುಮಂತಪ್ಪ, ಗ್ರಾಮ ಆಡಳಿತ ಅಧಿಕಾರಿಗಳಾದ ಬೀರಪ್ಪ ಹಾಗೂ ಸಂದೀಪ್ ಉಪಸ್ಥಿತರಿದ್ದು ಪ್ರಮುಖ ಮಾಹಿತಿಗಳನ್ನು ಕಲೆಹಾಕಿದರು.
ಈ ರೋಪ್ ವೇ ಯೋಜನೆ ಪೂರ್ಣಗೊಂಡರೆ ಜೋಗ್ ಜಲಪಾತದ ಸೌಂದರ್ಯವನ್ನು ಆಕಾಶ ಮಾರ್ಗದಲ್ಲಿ ಕಣ್ತುಂಬಿಕೊಳ್ಳುವ ಪ್ರವಾಸಿಗರ ಕನಸು ನನಸಾಗಲಿದ್ದು, ಸ್ಥಳೀಯ ಪ್ರವಾಸೋದ್ಯಮಕ್ಕೆ ದೊಡ್ಡ ಮಟ್ಟದ ಉತ್ತೇಜನ ಸಿಗಲಿದೆ.












