ಡಿಕೆಶಿ ಕ್ಯಾಬಿನೆಟ್‌ನಲ್ಲಿ ಪರಮೇಶ್ವರ್ ಏಕೈಕ ಡಿಸಿಎಂ : ಸಿದ್ದರಾಮಯ್ಯ ಪಟ್ಟಿಗೆ ಮಣಿದ ಹೈಕಮಾಂಡ್ -ಕಹಳೆ ನ್ಯೂಸ್

ಬೆಂಗಳೂರು: ಇಂದು ಸಂಜೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಬೆನ್ನಲ್ಲೇ, ಹಿರಿಯ ದಲಿತ ನಾಯಕ, ತುಮಕೂರಿನ ಕೊರಟಗೆರೆ ಶಾಸಕ ಡಾ. ಜಿ. ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ (DCM) ಹುದ್ದೆ ನೀಡುವುದು ಈಗ ಬಹುತೇಕ ಖಚಿತವಾಗಿದೆ.
ಆರಂಭದಲ್ಲಿ ಕೇವಲ ಮುಖ್ಯಮಂತ್ರಿ ಹುದ್ದೆಯನ್ನಷ್ಟೇ ಸೃಷ್ಟಿಸಲು ಯೋಚಿಸಿದ್ದ ಕಾಂಗ್ರೆಸ್ (Congress) ಹೈಕಮಾಂಡ್ ಸುದೀರ್ಘ ಚರ್ಚೆಗಳ ನಂತರ ಪಕ್ಷದ ಒಗ್ಗಟ್ಟು ಮತ್ತು ಪ್ರಮುಖ ಸಮುದಾಯಗಳ ಪ್ರಾತಿನಿಧ್ಯವನ್ನು ಬ್ಯಾಲೆನ್ಸ್ ಮಾಡಲು ಕೊನೆಗೂ ‘ಡಿಸಿಎಂ’ ಸೂತ್ರಕ್ಕೆ ಶರಣಾಗಿದೆ.
ಹೊಸ ಸಚಿವ ಸಂಪುಟದಲ್ಲಿ ಹಲವು ಪ್ರಭಾವಿ ನಾಯಕರು ಡಿಸಿಎಂ ಹುದ್ದೆಗಾಗಿ ತೀವ್ರ ಪೈಪೋಟಿ ನಡೆಸಿದ್ದರು ಮತ್ತು ತೆರೆಮರೆಯ ಕಸರತ್ತು ಜೋರಾಗಿತ್ತು. ಆದರೆ ರಾಜ್ಯದಲ್ಲಿ ಅಧಿಕಾರದ ಹಲವು ಕೇಂದ್ರಗಳು ಸೃಷ್ಟಿಯಾಗಬಾರದು ಎಂಬ ಕಾರಣಕ್ಕೆ ಅಂತಿಮವಾಗಿ ಡಾ. ಜಿ. ಪರಮೇಶ್ವರ್ ಅವರಿಗೆ ಮಾತ್ರ ಈ ಜವಾಬ್ದಾರಿ ನೀಡಲು ಹೈಕಮಾಂಡ್ ಸಮ್ಮತಿಸಿದೆ. ಆ ಮೂಲಕ ಡಿಕೆಶಿ ಕ್ಯಾಬಿನೆಟ್‌ನಲ್ಲಿ ಪರಮೇಶ್ವರ್ ಸೆಕೆಂಡ್ ಇನ್ ಕಮಾಂಡ್ ಆಗಿ ಹೊರಹೊಮ್ಮಲಿದ್ದಾರೆ.
ಡಾ. ಜಿ. ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ಹೊಸದೇನಲ್ಲ. ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲೂ ಅವರು ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.











