
ಕುಂದಾಪುರ : ಕಾಂಗ್ರೆಸ್ ಭವನ ನಿರ್ಮಾಣ ವಿರೋಧಿಸಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
ಕುಂದಾಪುರ ಕೇಂದ್ರ ಭಾಗದಲ್ಲಿರುವ ಮೌಲ್ಯಯುತ ಜಾಗವನ್ನು ಅತಿ ಕಡಿಮೆ ದರಕ್ಕೆ ಕಾಂಗ್ರೆಸ್ ಪಕ್ಷದ ಕಚೇರಿ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಬದ್ಧ ಹೋರಾಟ ನಡೆಸುವೆ ಎಂದು ಶಾಸಕ ಕಿರಣ್ ಕುಮಾರ ಕೊಡ್ಡಿ ಗುಡುಗಿದ್ದಾರೆ.
ಇಲ್ಲಿನ ಶಾಸ್ತ್ರೀವೃತ್ತದಲ್ಲಿ ಸರಕಾರಿ ಜಾಗದಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟ ಕ್ರಮ ಖಂಡಿಸಿ ಕುಂದಾಪುರ ಬಿಜೆಪಿ ಮಂಡಲ ಹಮ್ಮಿ ಕೊಂಡ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಕಳೆದ 30-40 ವರ್ಷಗಳಿಂದ ಬೋರ್ಡ್ ಹೈಸ್ಕೂಲ್‌ನ ಪಕ್ಕದ ಜಾಗದಲ್ಲಿ ಗೂಡ್ಸ್ ರಿಕ್ಷಾದವರು ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದಾರೆ. ನಿಲ್ದಾಣ ಮಾಡುವ ಬಗ್ಗೆ ಪುರಸಭೆಗೆ ಮನವಿ ಸಲ್ಲಿಸಿದರು ಗಣನೆಗೆ ತೆಗೆದುಕೊಂಡಿಲ್ಲ. ತುರ್ತು ಸೇವೆಗಾಗಿ ಅಗ್ನಿಶಾಮಕ ಠಾಣೆಯ ವಾಹನ ನಿಲುಗಡೆಗಾಗಿ ಅವಕಾಶ ಕೊಡಿ ಎಂದು ಕೇಳಿದರೂ ಅಧಿಕಾರಿಗಳು ಕೊಡಲಿಲ್ಲ. ಕುಂದಾಪುರ ಪಾರ್ಕಿಂಗ್ ಸಮಸ್ಯೆಯಿಂದ ಈ ಸ್ಥಳವನ್ನು ಪಾರ್ಕಿಂಗ್ ಸ್ಥಳವನ್ನಾಗಿಯಾದರೂ ನೋಟಿಫೈ ಮಾಡಿ ಎಂಬ ಬೇಡಿಕೆಯೂ ಸ್ಪಂದಿಸಿಲ್ಲ. ಏತನ್ಮಧ್ಯೆ 4ರಿಂದ 5 ಕೋಟಿ ರೂ. ಬೆಲೆಬಾಳುವ ಜಾಗವನ್ನು 1.45 ಲಕ್ಷಕ್ಕೆ ಸರಕಾರ ಕಾಂಗ್ರೆಸ್ ಪಕ್ಷದ ಕಚೇರಿಗೆ ಭೂ ಮಂಜೂರಾತಿ ಮಾಡಿಸಿದೆ. ಅಧಿಕಾರಿಗಳ ಈ ಷಡ್ಯಂತ್ರ್ಯ ಸಹಿಸಲ್ಲ ಎಂದು ಗುಡುಗಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕಚೇರಿ ನಿರ್ಮಿಸಲು ಹೊರಟಿರುವ ಜಾಗ ಮಲ್ಟಿ ಪರ್ಪಸ್ ಪಾರ್ಕಿಂಗ್‌ಗೆ ನಿಗದಿಯಾದ ಸ್ಥಳ. ಇದರ ಪ್ರಸ್ತಾವನೆ ಸರಕಾರದ ಮುಂದಿದೆ. ಅದು ಅಲ್ಲದೆ ಅಗ್ನಿಶಾಮಕ ಠಾಣೆಯ ವಾಹನ ನಿಲುಗಡೆಗೆ ಅನುವು ಮಾಡಿಕೊಡಬೇಕೆಂಬ ಬೇಡಿಕೆಯೂ ಇದೆ. ಇಂತಹ ಅಮೂಲ್ಯ ಜಾಗವನ್ನು ರಾಜಕೀಯ ಪಕ್ಷವೊಂದರ ಕಚೇರಿಗೆ ಬಳಸುವ ಬದಲು ಸಾರ್ವಜನಿಕ ಅನುಕೂಲಕ್ಕೆ ಬಳಕೆಯಾಗುವುದು ಸೂಕ್ತ. ಈ ಬಗ್ಗೆ ಸರಕಾರದ ಗಮನ ಸೆಳೆಯ ಲಾಗುವುದು. ಜಿಲ್ಲಾಧಿಕಾರಿ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸ ಲಾಗುವುದು.
ಕೂಡಲೆ ಕಾಂಗ್ರೆಸ್ ಪಕ್ಷಕ್ಕೆ ಮಾಡಿರುವ ಭೂಮಂಜೂರಾತಿ ರದ್ದು ಗೊಳಿಸಬೇಕು ಎಂದರು. ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಭೂಗಳ್ಳರ ಸರಕಾರವಿದೆ. ಸಾರ್ವಜನಿಕ ಕಲ್ಯಾಣಕ್ಕೆ ಮೀಸಲಿಟ್ಟ ಭೂಮಿಯನ್ನು ಸದ್ದಿಲ್ಲದೆ ರಾಜಕೀಯ ಪಕ್ಷಕ್ಕೆ ನೀಡುವ ಮೂಲಕ ಅನ್ಯಾಯ ವೆಸಗಿದೆ ಎಂದರು. ಕಾಡೂರು ಮುಖಂಡರಾದ ಮುಖಂಡ ರಾಜೇಶ್ ಕಾವೇರಿ ಮಾತನಾಡಿದರು. ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ನಿಕಟಪೂರ್ವ ಅಧ್ಯಕ್ಷ ಶಂಕರ ಅಂಕದಕಟ್ಟೆ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುಧೀರ ಕೆ.ಎಸ್. ಮತ್ತು ಕಾಳಾವರ ಸತೀಶ್ ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ಸುರೇಶ್ ಶೆಟ್ಟಿ, ಬಾರ್ಕೂರು ಶಾಂತಾರಾಮ ಶೆಟ್ಟಿ, ಮೋಹನದಾಸ ಶೆಣೈ, ಐರೋಡಿ ವಿಠಲ ಪೂಜಾರಿ, ಸುನಿಲ್ ಶೆಟ್ಟಿ ಹೇರಿಕುದ್ರು, ಮಂಜು ಬಿಲ್ಲವ, ಪ್ರಕಾಶ್ ಪೂಜಾರಿ ಬೀಜಾಡಿ, ಬಿಎಂಎಸ್ ಆಟೋರಿಕ್ಷಾ ಯೂನಿಯನ್ ಮುಖಂಡರಾದ ಸುರೇಶ್ ಪುತ್ರನ್, ಮಹೇಶ್ ಶೆಣೈ, ಪುರಸಭೆ ಮಾಜಿ ಸದಸ್ಯರು, ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು, ಎಸ್ಸಿಎಸ್ಟಿ ಮೋರ್ಚಾ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬಳಿಕ ತಹಸೀಲ್ದಾರ್ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.









