ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಮತ್ತು ಅಂತರ್ ವಲಯ ಮಟ್ಟದ ಮೂರು ದಿನಗಳ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಸಮಾರೋಪ: ಆಳ್ವಾಸ್ ಮೂಡಬಿದಿರೆ ಚಾಂಪಿಯನ್, ಎಸ್.ಡಿ.ಎಂ ಉಜಿರೆ ರನ್ನರ್ಸ್ -ಕಹಳೆ ನ್ಯೂಸ್

ಮಂಗಳೂರು : ಸುಳ್ಯದ ಪ್ರತಿಷ್ಠಿತ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಕಬಡ್ಡಿ ಪಂದ್ಯಾಟ ದಿನಾಂಕ 27 ಮಾರ್ಚ್ 2026ರಂದು ಮುಕ್ತಾಯಗೊಂಡಿದ್ದು, ಆಳ್ವಾಸ್ ಕಾಲೇಜು ಮೂಡಬಿದಿರೆ ಪ್ರಥಮ ಹಾಗೂ ಎಸ್.ಡಿ.ಎಂ ಕಾಲೇಜು ಉಜಿರೆ ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿತು.
ದಿನಾಂಕ 25 ಮತ್ತು 26ನೇ ಮಾರ್ಚ್ 2026ರಂದು ಪಂದ್ಯಾಟದ ಮೊದಲೆರಡು ದಿನ ಅಂತರ ಕಾಲೇಜು ಮಂಗಳೂರು ವಲಯದ ಪಂದ್ಯಾಟಗಳು ನಡೆದು ಎಸ್.ಡಿ.ಎಂ ಕಾಲೇಜು ಉಜಿರೆ ಪ್ರಥಮ ಹಾಗೂ ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತ್ತು. ಮಿಲಾಗ್ರೀಸ್ ಕಾಲೇಜು ಮಂಗಳೂರು ತೃತೀಯ ಮತ್ತು ಗೋಕರ್ಣನಾಥೇಶ್ವರ ಕಾಲೇಜು ಮಂಗಳೂರು ಚತುರ್ಥ ಸ್ಥಾನವನ್ನು ಪಡೆದುಕೊಂಡಿತ್ತು. ಮೂರನೇ ದಿನ ನಡೆದ ಅಂತರ ವಲಯ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜು ಮೂಡಬಿದಿರೆ ಪ್ರಥಮ ಹಾಗೂ ಎಸ್.ಡಿ.ಎಂ ಕಾಲೇಜು ಉಜಿರೆ ದ್ವಿತೀಯ, ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ತೃತೀಯ ಮತ್ತು ಮಿಲಾಗ್ರೀಸ್ ಕಾಲೇಜು ಮಂಗಳೂರು ಚತುರ್ಥ ಸ್ಥಾನವನ್ನು ಪಡೆದುಕೊಂಡವು.
ಮಂಗಳೂರು ವಲಯದ ಪಂದ್ಯಾಟದಲ್ಲಿ ಉತ್ತಮ ಹಿಡಿತಗಾರನಾಗಿ ಎಸ್.ಡಿ.ಎಂ ಕಾಲೇಜಿನ ಗೌತಮ್, ಉತ್ತಮ ರೈಡರ್ ಆಗಿ ಎಸ್.ಡಿ.ಎಂ ಕಾಲೇಜಿನ ದೇವ್ ಮತ್ತು ಸರ್ವಾಂಗೀಣ ಆಟಗಾರನಾಗಿ ಎನ್.ಎಂ.ಸಿ ಯ ಮನು ಇವರು ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದರು.
ಅಂತರ್ ವಲಯ ಮಟ್ಟದ ಪಂದ್ಯಾಟದಲ್ಲಿ ಉತ್ತಮ ಹಿಡಿತಗಾರನಾಗಿ ಆಳ್ವಾಸ್ ಕಾಲೇಜಿನ ಧಾನು, ಉತ್ತಮ ರೈಡರ್ ಆಗಿ ಎಸ್.ಡಿ.ಎಂ ಕಾಲೇಜಿನ ಜಾನು ಹಾಗೂ ಸರ್ವಾಂಗೀಣ ಆಟಗಾರನಾಗಿ ಆಳ್ವಾಸ್ ಕಾಲೇಜಿನ ಸಾಯಿ ಪ್ರಸಾದ್ ಇವರುಗಳು ಪ್ರಶಸ್ತಿಯನ್ನು ಪಡೆದುಕೊಂಡರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ KVG ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಆರ್ತೊಪಿಡಿಕ್ ಸರ್ಜನ್ ಡಾ. ಪ್ರಸಾದ್ ಎಂ.ಎಸ್, ಗೌರವಾನ್ವಿತ ಅತಿಥಿಗಳಾಗಿ ಎನ್.ಎಂ.ಸಿಯ ವಿಶ್ರಾಂತ ಪ್ರಾಂಶುಪಾಲರಾದ ಡಾ. ಗಿರಿಧರ ಗೌಡ ಕೆ, ಅಡ್ವೊಕೇಟ್ ಶ್ರೀ ವೆಂಕಪ್ಪ ಗೌಡ, ಎನ್.ಎಂ.ಸಿಯ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಶ್ರೀ ದೊಡ್ಡಣ್ಣ ಬರೆಮೇಲು, ಎನ್.ಎಂ.ಸಿಯ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರು ಶ್ರೀ ರಾಧಾಕೃಷ್ಣ ಮಾಣಿಬೆಟ್ಟು ಇವರುಗಳು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆಡಳಿತಧಿಕಾರಿ ಚಂದ್ರಶೇಖರ ಪೇರಾಲು, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀಮತಿ ರತ್ನಾವತಿ ಡಿ, ಐಕ್ಯುಎಸಿ ಸಂಚಾಲಕರಾದ ಡಾ.ಮಮತಾ ಕೆ, ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಸೀತಾರಾಮ ಎಂ.ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.









