
ಮಂಗಳೂರು: ನಗರದ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ “ಮಂಗಳೂರು ರಥೋತ್ಸವ’ (ಕೋಡಿಯಾಲ ತೇರು) ಸಹಸ್ರಾರು ಭಕ್ತರ ಸಮಕ್ಷಮ ರವಿವಾರ ವಿಜೃಂಭಣೆಯಿಂದ ನೆರವೇರಿತು.
ರಥೋತ್ಸವ ಪ್ರಕ್ರಿಯಾದಿಗಳು ಬೆಳಗ್ಗೆಯೇ ಮಹಾಪ್ರಾರ್ಥನೆ ಯೊಂದಿಗೆ ಪ್ರಾರಂಭಗೊಂಡು ಶ್ರೀ ವೀರ ವೆಂಕಟೇಶ ಸಹಿತ ಪರಿವಾರ ದೇವರಿಗೆ ಪಂಚಾಮೃತಾಭಿಷೇಕ, ಶತಕಲಶಾಭಿಷೇಕ, ಪುಳಕಾಭಿಷೇಕ ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧೀಶ ಶ್ರೀ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರಿಂದ ನೆರವೇರಿತು.
ಯಜ್ಞಮಂಟಪದಲ್ಲಿ ಮಹಾ ಯಜ್ಞ, ಮಹಾ ಪೂರ್ಣಾಹುತಿ ನೆರವೇರಿದ ಬಳಿಕ ಶ್ರೀ ದೇವರು ಸ್ವರ್ಣ ಪಲ್ಲಕಿಯಲ್ಲಿ ವಿರಾಜಮಾನರಾಗಿ ಉತ್ಸವ ನಡೆದು, ಬಳಿಕ ಭವ್ಯ ಬ್ರಹ್ಮರಥದಲ್ಲಿ ರಥಾರೂಢರಾದರು.
ಊರ ಪರವೂರಿನಿಂದ ಜಿಎಸ್‌ಬಿ ಸಮುದಾಯದ ಭಕ್ತರು ಆಗಮಿಸಿದ್ದು ಅವರ ಭಕ್ತಿಪೂರ್ವಕ ಭಜನೆ, ನಮನ, ಪ್ರಾರ್ಥನೆಗಳ ನಡುವೆ ಶ್ರೀಗಳು ರಥಾರೋಹಣ ನಡೆಸಿ, ಪೂಜೆ ನೆರವೇರಿಸಿ ಪ್ರಸಾದ ನೀಡಿದರು. ಬಳಿಕ ಭಜಕರು ಭಕ್ತಪರವಶರಾಗಿ “ಗೋವಿಂದಾ… ಗೋವಿಂದಾ…’ ಘೋಷಣೆಯೊಂದಿಗೆ ಬ್ರಹ್ಮರಥವನ್ನು ಎಳೆದು ಪುನೀತರಾದರು.









