
ಮೂಡುಬಿದಿರೆ: ಇಲ್ಲಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ ಯುವತಿಯೋರ್ವಳು ಗುರುಪುರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಕರುಣಾಜನಕ ಘಟನೆ ನಡೆದಿದೆ.
ಮೂಡುಬಿದಿರೆ ಗಾಂಧಿನಗರ ಸಮೀಪದ ಕಡೆಪಲ್ಲ ನಿವಾಸಿ ನವ್ಯ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆ ಮೂಡುಬಿದಿರೆಯ ಅಲಂಕಾರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರದಂದು ನವ್ಯ ತನ್ನ ನಿಗ್ಗೋಡಿ ಮೂಲದ ಸ್ನೇಹಿತೆಯ ಜೊತೆಗೆ ಗುರುಪುರ ನದಿ ತೀರಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ನವ್ಯ ದಿಢೀರನೆ ನದಿಗೆ ಹಾರಿದ್ದಾರೆ. ಇದನ್ನು ಕಂಡು ಗಾಬರಿಗೊಂಡ ಸ್ನೇಹಿತೆ, ನವ್ಯರನ್ನು ರಕ್ಷಿಸಲು ಕೈ ಹಿಡಿದು ಎಳೆಯಲು ಪ್ರಯತ್ನಪಟ್ಟಿದ್ದಾರೆ. ಆದರೆ ಯತ್ನ ವಿಫಲವಾಗಿದ್ದು, ಈ ವೇಳೆ ಸ್ನೇಹಿತೆಯ ಕೈಗೆ ತೀವ್ರವಾದ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಮಿಥುನ್ ರೈ ಅವರಿಂದ ತುರ್ತು ಸ್ಪಂದನೆ:
ಘಟನೆ ನಡೆದ ವೇಳೆ ಆ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಅವರು ತಕ್ಷಣ ಸ್ಪಂದಿಸಿದರು. ಕೂಡಲೇ ಸ್ಥಳೀಯರ ನೆರವಿನೊಂದಿಗೆ ನದಿಯಿಂದ ಶವವನ್ನು ಮೇಲಕ್ಕೆತ್ತಲು ಅಗತ್ಯವಿರುವ ತುರ್ತು ವ್ಯವಸ್ಥೆಗಳನ್ನು ಮಾಡಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.









