
ಬೆಂಗಳೂರು/ಬೆಳಗಾವಿ: ರಾಜ್ಯದಲ್ಲಿ ಹೆಣ್ಣು ಭ್ರೂಣಹತ್ಯೆ ನಿಂತಿಲ್ಲ. ಭ್ರೂಣಹತ್ಯೆ ತಡೆಗೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸಿ.ಟಿ ರವಿ ಪ್ರಶ್ನೆ ಕೇಳಿದರು. ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗುತ್ತಿದೆ. ಸರ್ಕಾರಿ ವೈದ್ಯರು, ನರ್ಸ್ಗಳು ಇದ್ದಾರೆ. ಭ್ರೂಣ ಹತ್ಯೆ ಮಾಡೋ ಹೈಟೆಕ್ ಜಾಲ ಕೆಲಸ ಮಾಡ್ತಿದೆ. ಈಗ ಇರುವ ಕಾನೂನು ಸರಿಯಾಗಿ ಕೆಲಸ ಮಾಡ್ತಿಲ್ಲ. ಹೆಣ್ಣು ಭ್ರೂಣ ಹತ್ಯೆ ನಿಷೇಧಕ್ಕೆ ಮತ್ತಷ್ಟು ಪ್ರಬಲ ಕಾನೂನು ಬೇಕು. ಇಂತಹ ಅಕ್ರಮದಲ್ಲಿ ಭಾಗಿಯಾಗೋ ವೈದ್ಯರ ಲೈಸೆನ್ಸ್ ರದ್ದು ಮಾಡಿ ಎಂದು ಆಗ್ರಹಿಸಿದ್ದಾರೆ.
ಇದಕ್ಕೆ ಸಚಿವ ದಿನೇಶ್ ಗುಂಡೂರಾವ್ ಉತ್ತರ ನೀಡಿ, ಹೆಣ್ಣು ಭ್ರೂಣ ಹತ್ಯೆ ಸಾಮಾಜಿಕ ಪಿಡುಕು. ಯಾರು ಒತ್ತಡದಿಂದ ಭ್ರೂಣ ಹತ್ಯೆ ಮಾಡಿಕೊಳ್ತಿಲ್ಲ. ಅವರೇ ಇಚ್ಛೆಪಟ್ಟು ಮಾಡ್ತಾ ಇದ್ದಾರೆ. ಭ್ರೂಣ ಹತ್ಯೆ ನಿಷೇಧ ಇದೆ. ಭ್ರೂಣ ಪತ್ತೆಗೆ ಹೊಸ ಹೊಸ ಯಂತ್ರ ಬಂದಿವೆ. ಇದರಿಂದ ಪತ್ತೆ ಹಚ್ಚುತ್ತಿದ್ದಾರೆ. ಕೇಂದ್ರದ ಜೊತೆ ನಾವು ಈ ಸಂಬಂಧ ಮಾತಾಡ್ತಿದ್ದೇವೆ. ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ನಿಂತಿಲ್ಲ ನಡೆಯುತ್ತಿದೆ ಎಂದಿದ್ದಾರೆ.









