ಕೈ ಹೈಕಮಾಂಡ್ ಗೆ ಬ್ಲ್ಯಾಕ್ ಮೇಲ್ ಮಾಡಲು ಸಿದ್ದರಾಮಯ್ಯ ಸಮಾವೇಶ: ಬಿ ವೈ ವಿಜಯೇಂದ್ರ – ಕಹಳೆ ನ್ಯೂಸ್

ಮೈಸೂರು: ಸಿದ್ದರಾಮಯ್ಯ ಅಂದರೆ ಸಮಾವೇಶ, ಸಮಾವೇಶ ಅಂದರೆ ಸಿದ್ದರಾಮಯ್ಯ. ಸಿಎಂ ಸ್ಥಾನ ಅಲ್ಲಾಡುವ ವೇಳೆಯಲ್ಲಿ ಈ ರೀತಿಯ ಸಮಾವೇಶ ಮಾಡಿ ಕಾಂಗ್ರೆಸ್ ಹೈಕಮಾಂಡ್ ಗೆ ಬೆದರಿಸುವ ತಂತ್ರ ಸಿದ್ದರಾಮಯ್ಯಗೆ ಸಿದ್ಧಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಶುಕ್ರವಾರ (ಜು.18) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಗೆ ದೆಹಲಿಯಲ್ಲಿ ರಾಹುಲ್ ಗಾಂಧಿ ಭೇಟಿಗೆ ಸಮಯವೇ ಸಿಕ್ಕಿಲ್ಲ, ರಾಹುಲ್ ಗಾಂಧಿ ಸಮಯ ಕೂಡ ಕೊಟ್ಟಿಲ್ಲ. ಹೀಗಾಗಿ ಕಾಂಗ್ರೆಸ್ ಗೆ ಸವಾಲು ಹಾಕಲು ಸಾಧನಾ ಸಮಾವೇಶ ಮಾಡುತ್ತಿದ್ದಾರೆ. ಇದು ಸಾಧನಾ ಸಮಾವೇಶ ಅಲ್ಲ. ಕಾಂಗ್ರೆಸ್ ಹೈಕಮಾಂಡ್ ಗೆ ಮಾಡುತ್ತಿರುವ ಬ್ಲ್ಯಾಕ್ ಮೇಲ್ ಸಮಾವೇಶ. ರಾಜ್ಯಕ್ಕಾಗಿ ಏನು ಕಡಿದು ಕಟ್ಟೆ ಹಾಕಿದ್ದಾರೆ ಎಂದು ಸಮಾವೇಶ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ಸಮಯ ಬಂದಿದೆ. ಹೀಗಾಗಿ ಹೈಕಮಾಂಡ್ ಬೆದರಿಸಲು ಸಿಎಂ ಸಮಾವೇಶ ಮಾಡುತ್ತಿದ್ದಾರೆ. ಮುಡಾ ಹಗರಣದ ವೇಳೆಯೂ ಮೈಸೂರಿನಲ್ಲಿ ಸಮಾವೇಶ ಮಾಡಿದರು. ತಮ್ಮ ಕುರ್ಚಿಗೆ ಸಂಕಷ್ಟ ಬಂದಾಗ ಅಹಿಂದ ಸಮುದಾಯ ನೆನಪಾಗುತ್ತದೆ. ಅಹಿಂದ ಸಮುದಾಯ ಇವರ ಮತ ಬ್ಯಾಂಕ್ ಮಾತ್ರ ಎಂದು ವಿಜಯೇಂದ್ರ ಹೇಳಿದರು.
ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಸಲ್ಲಿಕೆಯಾದ ಕುನ್ಹಾ ವರದಿ ಅರೆಬೆಂದಿದೆ. ಸಿಎಂ – ಡಿಸಿಎಂ ಪೈಪೋಟಿಗೆ 11 ಜನ ಬಲಿಯಾದರು. ಈ ತಪ್ಪು ಮುಚ್ಚಿಕೊಳ್ಳಲು ಆರ್ ಸಿಬಿ ತಂಡವನ್ನು ಬಲಿಪಶು ಮಾಡಿದ್ದಾರೆ. ಈ ವರದಿ ಸಮರ್ಪಕ ಮತ್ತು ನ್ಯಾಯಯುತವಾಗಿಲ್ಲ. ಸಿಎಂಗೆ ಪ್ರಾಮಾಣಿಕತೆ ಇದ್ದಿದ್ದರೆ ಇಂತಹ ವರದಿಯನ್ನು ನ್ಯಾಯಾಲಯದ ಮುಂದೆ ಇಡುತ್ತಿರಲಿಲ್ಲ ಎಂದು ಟೀಕೆ ಮಾಡಿದರು.
ದಲಿತರನ್ನು ಬಿಜೆಪಿ ರಾಜ್ಯಾಧ್ಯಕ್ಷ ಮಾಡಿ ಎಂಬ ಸಿಎಂ ಟ್ವೀಟ್ ಗೆ ಬಿಜೆಪಿ ರಾಜ್ಯಾಧ್ಯಕ್ಷ ತಿರುಗೇಟು ನೀಡಿದ ಬಿ.ವೈ.ವಿಜಯೇಂದ್ರ, ಬಿಜೆಪಿ ದಲಿತ ಸಮುದಾಯಕ್ಕೆ ಬಹಳ ದೊಡ್ಡ ಗೌರವ ಕೊಟ್ಟಿದೆ. ದಲಿತ ಸಮುದಾಯದ ರಾಮನಾಥ್ ಕೋವಿದ್ ಅವರನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ. ರಾಷ್ಟ್ರಪತಿ ಸ್ಥಾನಕ್ಕೆ ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮುರನ್ನು ಕೂರಿಸಿದೆ. ಪ್ರಧಾನಿ ನರೇಂದ್ರ ಮೋದಿ ಸಹ ಹಿಂದುಳಿದ ಸಮುದಾಯದವರು. ಇದನ್ನು ಸಿಎಂ ಸಿದ್ದರಾಮಯ್ಯ ಗಮನಿಸಲಿ. ದೇವರಾಜ್ ಅರಸುರಂತಹ ಹಿಂದುಳಿದ ನಾಯಕನಿಗೆ ಅವಮಾನ ಮಾಡಿದ್ದು ಕಾಂಗ್ರೆಸ್. ದೇವರಾಜ ಅರಸು ಅವರನ್ನು ಸಿಎಂ ಸ್ಥಾನದಿಂದ ಬಹಳ ಅಗೌರವದಿಂದ ಕೆಳಗೆ ಇಳಿಸಿದ್ದು ಕಾಂಗ್ರೆಸ್ ಎನ್ನುವುದನ್ನು ಸಿದ್ದರಾಮಯ್ಯ ನೆನಪು ಮಾಡಿಕೊಳ್ಳಲಿ ಎಂದರು.
ಬೇಕರಿ, ಅಂಗಡಿಗೆ ಜಿಎಸ್ ಟಿ ವಿಚಾರಕ್ಕೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಣ ಇಲ್ಲದೇ ಪರದಾಡುತ್ತಿದೆ. ಈ ಕಾರಣದಿಂದ ಚಿಲ್ಲರೆ ಅಂಗಡಿಯವರಿಗೂ ಜಿ ಎಸ್ ಟಿ ಹೆಸರಿನಲ್ಲಿ ಬರೆ ಹಾಕುತ್ತಿದೆ ಎಂದರು.









