ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೇ 30 ರಿಂದ ಬೆಳಗಿನ ಉಪಾಹಾರ ಪ್ರಸಾದ ವ್ಯವಸ್ಥೆ ಆರಂಭ -ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರಿಗೆ ಬೆಳಗಿನ ಉಪಾಹಾರ ಪ್ರಸಾದದ ವ್ಯವಸ್ಥೆಗೆ ಮೇ 30 ರಂದು ಚಾಲನೆ ಸಿಗಲಿದೆ.
ದೇಗುಲದ ಷಣ್ಮುಖ ಭೋಜನ ಶಾಲೆಯಲ್ಲಿ ಬೆಳಗ್ಗೆ 8 ರಿಂದ 10ರ ವರೆಗೆ ಭಕ್ತರಿಗೆ ಉಪಾಹಾರ ನೀಡಲಾಗುವುದು. ಮೂರು- ನಾಲ್ಕು ಬಗೆಯ ಉಪಹಾರ(ತಿಂಡಿ), ಜತೆಗೆ ಕಷಾಯ ವಿತರಿಸಲಾಗುವುದು.
ಮುಜರಾಯಿ ಸಚಿವರ ಸಲಹೆಯಂತೆ, ಇತ್ತೀಚೆಗೆ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಭಕ್ತರಿಗೆ ಬೆಳಗ್ಗೆ ಉಪಾಹಾರ ನೀಡುವ ಬಗ್ಗೆ ನಿರ್ಧರಿಸಲಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಏಕಕಾಲದಲ್ಲಿ ಮೂರು ಸಾವಿರ ಮಂದಿ ಕುಳಿತು ಭೋಜನ ಪ್ರಸಾದ ಸ್ವೀಕರಿಸುವ ನೂತನ ಭೋಜನ ಶಾಲೆಯ ಕಟ್ಟಡ ನಿರ್ಮಿಸುವ ಬಗ್ಗೆ ಯೋಜನೆ ರೂಪಿಸಲಾಗಿದೆ. ಮುಂದಿನ 2-3 ವರ್ಷಗಳಲ್ಲಿ ನೂತನ ಕಟ್ಟಡ ಸಿದ್ದವಾಗಲಿದೆ ಎಂದ ಅವರು, ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಅದಕ್ಕೆ ತಕ್ಕಂತೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಯಾತ್ರಿಕರಿಗೆ ತಂಗಲು ಇನ್ನಷ್ಟು ವಸತಿ ಗೃಹ ನಿರ್ಮಾಣವಾಗಬೇಕಿದೆ. ಅದರ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಮುಂದಿನ ತಿಂಗಳಲ್ಲಿ ಮುಜರಾಯಿ ಸಚಿವರು ಸುಬ್ರಹ್ಮಣ್ಯಕ್ಕೆ ಬಂದು ಸಭೆ ನಡೆಸಲಿದ್ದು, ಆ ಸಭೆಯಲ್ಲಿ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಲಾಗುವುದು. ಸುತ್ತುಪೌಳಿ, ಆಶ್ಲೇಷ ಬಲಿ ಸೇವೆ ನೆರವೇರಿಸಲು ಹೊಸ ಕಟ್ಟಡದ ಕಾಮಗಾರಿಯನ್ನು ಶೀಘ್ರವೇ ಪ್ರಾರಂಭಿಸಲು ಪ್ರಯತ್ನಿಸಲಾಗುತ್ತಿದೆ ಎಂದರು. ಶೀಘ್ರ ಆರಂಭಕ್ಕೆ ಪ್ರಯತ್ನ ನಡೆಯುತ್ತಿದೆ ಎಂದರು.
ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.









