ನ.4ರಂದು ಉಪ್ಪಿನಂಗಡಿಗೆ ಬರಲಿದೆ ನಾಡ ಪ್ರಭು ಕೆಂಪೇಗೌಡರ ಪುತ್ಥಳಿ ಅನಾವರಣದ ಪವಿತ್ರ ಮೃತಿಕೆ ಸಂಗ್ರಹಣಾ ರಥಯಾತ್ರೆ – ಕಹಳೆ ನ್ಯೂಸ್

ಉಪ್ಪಿನಂಗಡಿ: ನಾಡ ಪ್ರಭು ಕೆಂಪೇಗೌಡರ ಪುತ್ಥಳಿ ಅನಾವರಣ ಪ್ರಧಾನಿ ನರೇಂದ್ರ ಮೋದಿಯವರಿಂದ ಬೆಂಗಳೂರಿನಲ್ಲಿ ನಡೆಯಲಿದ್ದು, ಇದಕ್ಕಾಗಿ ಪವಿತ್ರ ಮೃತಿಕೆ ಸಂಗ್ರಹಣಾ ರಥಯಾತ್ರೆಯು ನ.4ರಂದು ಉಪ್ಪಿನಂಗಡಿಗೆ ಬರಲಿದೆ. ಅದನ್ನು ಸ್ವಾಗತಿಸುವ ಬಗ್ಗೆ ಗ್ರಾ.ಪಂ. ಸದಸ್ಯರು, ಸರಕಾರಿ ಅಧಿಕಾರಿಗಳು, ಪ್ರಮುಖರು ಉಪ್ಪಿನಂಗಡಿಯಲ್ಲಿ ಸಭೆ ನಡೆಸಿ ಸಮಾಲೋಚನೆ ನಡೆಸಿದರು.
ರಥವು ನ.4ರಂದು 11:30ರ ಸುಮಾರಿಗೆ ರಥಯಾತ್ರೆಯು ಗಾಂಧಿಪಾರ್ಕ್ ಬಳಿ ಆಗಮಿಸಲಿದ್ದು, ಆಗ ಅದನ್ನು ಗೌರವವೂರ್ವಕವಾಗಿ ಸ್ವಾಗತಿಸಲು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ – ಮಹಾಕಾಳಿ ಸನ್ನಿಧಿಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು. ಅಲ್ಲಿಂದ ಶೈಣೈ ಆಸ್ಪತ್ರೆ – ಇಂದ್ರಪ್ರಸ್ಥ ವಿದ್ಯಾಲಯ ರಸ್ತೆಯಾಗಿ ಶ್ರೀ ಸಹಸ್ತ್ರಲಿಂಗೇಶ್ವರ – ಮಹಾಕಾಳಿ ದೇವಾಲಯಕ್ಕೆ ಮೆರವಣಿಗೆಯಲ್ಲಿ ಕರೆದುಕೊಂಡು ಬಂದು ಬಳಿಕ ಅಲ್ಲಿ ಪವಿತ್ರ ಜಾಗಗಳಿಂದ ಸಂಗ್ರಹಿಸಿದ ಮೃತಿಕೆಯನ್ನು ನೀಡಲು ನಿರ್ಧರಿಸಲಾಯಿತು. ಬಳಿಕ ಅಲ್ಲಿಂದ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿ ಕೆಂಪೇಗೌಡರ ಬದುಕಿನ ಸಾಧನೆಗಳನ್ನೊಳಗೊಂಡ ವಿಡಿಯೋವನ್ನು ಪ್ಲೇ ಮಾಡಿ, ಬಳಿಕ ಕಾರ್ಯಕ್ರಮದ ಬಗ್ಗೆ ಶಾಸಕ ಸಂಜೀವ ಮಠಂದೂರು ಅವರ ಮಾತಿನ ಬಳಿಕ ರಥವನ್ನು ಉಪ್ಪಿನಂಗಡಿ ಯಿಂದ ಬೀಳ್ಕೊಡಲು ನಿರ್ಧರಿಸಲಾಯಿತು.
ಸಭೆಯಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾಚಂದ್ರ ಮುಳಿಯ, ಸದಸ್ಯರಾದ ಸುರೇಶ್ ಅತ್ರೆಮಜಲು, ಹಿರೇಬಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಾವತಿ, 34 ನೆಕ್ಕಿಲಾಡಿ ಗ್ರಾ.ಪಂ. ಉಪಾಧ್ಯಕ್ಷೆ ಸ್ವಪ್ನ, ಸದಸ್ಯೆ ರತ್ನಾವತಿ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಜಯಂತ ಪೊರೋಳಿ, ಹರಿರಾಮಚಂದ್ರ, ಶಾಂತಿನಗರ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ದ ಆಡಳಿತ ಮೊಕ್ತೇಸರ ಯು.ಜಿ.ರಾಧಾ, ಬಿಎಸ್ಸೆಫ್ ನ ನಿವೃತ ಕಮಾಂಡರ್ ಚಂದಪ್ಪ ಮೂಲ್ಯ, ಉಪ್ಪಿನಂಗಡಿ ಗ್ರಾಮಕರಣಿಕ ರಮೇಶ್, ಅರಣ್ಯಾಧಿಕಾರಿ ಸಂದೀಪ್, 34 ನೆಕ್ಕಿಲಾಡಿ ಪಿಡಿಒ ಸತೀಶ ಬಂಗೇರ, ಹಿರೇಬಂಡಾಡಿ ಗ್ರಾ.ಪಂ. ಪಿಡಿಒ ದಿನೇಶ್ ಶೆಟ್ಟಿ, ಪ್ರಮುಖರಾದ ಮುಕುಂದ ಬಜತ್ತೂರು, ಕಂಗ್ವೆ ವಿಶ್ವನಾಥ ಶೆಟ್ಟಿ, ಪ್ರಸಾದ್ ಬಂಡಾರಿ, ಸದಾನಂದ ನೆಕ್ಕಿಲಾಡಿ ಮತ್ತಿತರರು ಉಪಸ್ಥಿತರಿದ್ದರು.










