ದಾವಣಗೆರೆ, ಜನವರಿ 14: ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಶಿವಮೊಗ್ಗ ರಸ್ತೆಯಲ್ಲಿರುವ ಹರಿಹರೇಶ್ವರ ಲೇಔಟ್ ನಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಲೇಔಟ್ ನ ಒಳ ಚರಂಡಿ ಚೇಂಬರ್ ನಲ್ಲಿ ವ್ಯಕ್ತಿಯೊಬ್ಬರ ಅಸ್ಥಿಪಂಜರ ಪತ್ತೆಯಾಗಿದೆ.

ಅಸ್ಥಿಪಂಜರಗಳ ಕುತೂಹಲಗಳ ಸುತ್ತ: ಅವರು ಪ್ರೇಮಿಗಳಲ್ಲ ಇನ್ಯಾರು?
ಛೇಂಬರ್ ಸ್ವಚ್ಛಗೊಳಿಸಲು ಬಂದಿದ್ದ ಕಾರ್ಮಿಕರು ಛೇಂಬರ್ ತೆಗೆಯುತ್ತಿದ್ದಂತೆ ಅಸ್ಥಿಪಂಜರ ನೋಡಿ ಭಯಗೊಂಡಿದ್ದಾರೆ. ನಂತರ ಹರಿಹರ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಹರಿಹರ ನಗರ ಠಾಣೆ ಪೊಲೀಸರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಭೇಟಿ ನೀಡಿ ಅಸ್ಥಿಪಂಜರವನ್ನು ಹೊರ ತೆಗೆದು ಪರಿಶೀಲನೆ ನಡೆಸಿದರು. ಯಾರೋ ಕೊಲೆ ಮಾಡಿ ಶವವನ್ನು ಇದರೊಳಗೆ ಬಿಸಾಡಿದ್ದಾರೆ ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಅಸ್ಥಿಪಂಜರ 25 ರಿಂದ 30 ವಯೋಮಾನದ ಯುವಕನದ್ದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.









